ಮುಲ್ಕಿ: ಇಲ್ಲಿಗೆ ಸಮೀಪದ ಪಡುಪಣಂಬೂರು ಹೊಯಿಗೆ ಗುಡ್ಡೆ ಶ್ರೀ ಉಮಾಮಹೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಭಾನುವಾರ ವಾರ್ಷಿಕ ಜಾತ್ರಾ ಮಹೋತ್ಸವದ ಪ್ರಯುಕ್ತ ಹಗಲು ರಥೋತ್ಸವ ವಿಜೃಂಭಣೆಯಿಂದ ನಡೆಯಿತು.
ಭಾನುವಾರ ಬೆಳಿಗ್ಗೆ ನವಕ ಪ್ರಧಾನ, ಅಲಂಕಾರ ಪೂಜೆ, ಮಹಾ ಪೂಜೆಯಾಗಿ ಶ್ರೀ ದೇವರ ಬಲಿ ಹೊರಟು ರಥಾರೋಹಣ ನಡೆಯಿತು. ಬಳಿಕ ಪಲ್ಲಪೂಜೆ ನಡೆದು ಮಹಾ ಅನ್ನ ಸಂತರ್ಪಣೆ ನಡೆಯಿತು.
ಸಾಯಂಕಾಲ ಹೂವಿನ ಪೂಜೆ ಬಯನ ಬಲಿ, ಕವಾಟ ಬಂಧನ ವೇದಮೂರ್ತಿ ಶಿಬರೂರು ವೇದವ್ಯಾಸ ತಂತ್ರಿಗಳ ನೇತೃತ್ವದಲ್ಲಿ ನಡೆಯಿತು.
ಈ ಸಂದರ್ಭ ದೇವಳದ ಆಡಳಿತ ಮೊಕ್ತೇಸರ ರಂಗನಾಥ ಭಟ್ ಮಾತನಾಡಿ, ಸೋಮವಾರ ಬೆಳಿಗ್ಗೆ ದೇವರ ಕವಾಟೋದ್ಘಾಟನೆ , ಮಹಾಭಿಷೇಕ, ಅಲಂಕಾರ ಪೂಜೆ, ಪ್ರಸಾದ ವಿತರಣೆ, ತುಲಾಭಾರ ಸೇವೆ ನಡೆಯಲಿದೆ. ಮಧ್ಯಾಹ್ನ ಶ್ರೀ ನಾಗದೇವರಿಗೆ ಪಂಚಾಮೃತ ಅಭಿಷೇಕ ನಡೆಯಲಿದೆ. ಬಳಿಕ ರಾತ್ರಿ ಲಚ್ಚಿಲು ಸಂಕೇಸ ಶ್ರೀ ಜಾರಂದಾಯ ದೈವದ ಭಂಡಾರ ಬರಲಿದೆ. ಅದೇ ರಾತ್ರಿ 7 ಗಂಟೆಗೆ ಶ್ರೀ ದೇವರ ಬಲಿ ಹೊರಟು ಓಕುಳಿ ಬಲಿಯಾಗಿ ಶ್ರೀ ಗೌರಿಶಂಕರ ದೇವಸ್ಥಾನದಲ್ಲಿ ಕಟ್ಟೆ ಪೂಜೆಯಾಗಿ ಶ್ರೀ ದೇವರ ಮಹಾರಥೋತ್ಸವ, ಅವಭೃತ ಸ್ನಾನ, ಜಳಕದ ಬಲಿ, ಶ್ರೀ ದೈವ- ದೇವರ ಭೇಟಿ ಧ್ವಜಾವರೋಹಣ ನಡೆಯಲಿದೆ. ಬಳಿಕ ಶ್ರೀ ಜಾರಂದಾಯ ದೈವದ ಕೋಲ ಬಲಿ, ಪ್ರಸಾದ ವಿತರಣೆ, ಶ್ರೀ ಜಾರಂದಾಯ ದೈವದ ಭಂಡಾರ ನಿರ್ಗಮನವಾಗಲಿದೆ ಎಂದರು. ಮಾ.11 ರಂದು ಶ್ರೀ ದೇವರಿಗೆ ಮಹಾರಾತ್ರಿ ಉತ್ಸವ ನಡೆಯಲಿದ್ದು, ಸಾಯಂಕಾಲ ರಂಗಪೂಜೆ, ಉತ್ಸವ ಬಲಿ, ಅನ್ನ ಸಂತರ್ಪಣೆ ನಡೆಯಲಿದೆ.
ಭಕ್ತಾದಿಗಳು ಕೊರೊನಾ ನಿಯಮ ಪಾಲಿಸಿಕೊಂಡು ಮಾಸ್ಕ್, ಸ್ಯಾನಿಟೈಸರ್ ಕಡ್ಡಾಯವಾಗಿ ಬಳಸಿ ಉತ್ಸವದಲ್ಲಿ ಪಾಲ್ಗೊಳ್ಳಬೇಕೆಂದು ವಿನಂತಿಸಿದ್ದಾರೆ. ರಾಮಭಟ್, ರಾಜ ಭಟ್, ಗಣಪತಿ ಭಟ್, ರಾಘವ ಶೆಟ್ಟಿ, ಎಸ್ ಕೆಪಿಎ ಬ್ಯಾಂಕ್ ನಿರ್ದೇಶಕರಾದ ಮೋಹನ್ ರಾವ್ ಪಾವಂಜೆ, ಅಚ್ಚುತ ಭಟ್ ಪಾವಂಜೆ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
31/01/2021 04:05 pm