ಮಂಗಳೂರು: ಇಂದು ಮಂಗಳೂರಿನ ಕದ್ರಿಯ ಆ ಪರಿಸರ ಅಕ್ಷರಶಃ ನಂದಗೋಕುಲವಾಗಿತ್ತು! ಕಂದ ಕೃಷ್ಣನಿಂದ ಹಿಡಿದು ಯಶೋದೆ, ವಸುದೇವ ಕೃಷ್ಣನವರೆಗೂ ಸಾವಿರಾರು ಕೃಷ್ಣಂದಿರು ಇದ್ದರು.
ಈ ಮನಮೋಹಕ ದೃಶ್ಯಾವಳಿ ಕಂಡುಬಂದಿದ್ದು, ಮಂಗಳೂರಿನ ಕದ್ರಿ ಶ್ರೀ ಮಂಜುನಾಥೇಶ್ವರ ದೇವಸ್ಥಾನ ವಠಾರದಲ್ಲಿ. ಮಂಗಳೂರಿನ ಕಲ್ಕೂರ ಪ್ರತಿಷ್ಠಾನ ಆಯೋಜಿಸಿದ ರಾಷ್ಟ್ರೀಯ ಮಟ್ಟದ ಕೃಷ್ಣವೇಷ ಸ್ಫರ್ಧೆ ಎಲ್ಲರ ಗಮನ ಸೆಳೆಯಿತು. ಹೌದು... ಕೃಷ್ಣನ ಬಾಲ್ಯ ನೆನಪಿಸುವ ಕಂದಕೃಷ್ಣ, ಬಾಲಕೃಷ್ಣ, ತುಂಟಕೃಷ್ಣ, ಮುದ್ದುಕೃಷ್ಣ,ಕಿಶೋರ ಕೃಷ್ಣ, ಶ್ರೀಕೃಷ್ಣ ಸೇರಿದಂತೆ ಗೀತಾಕೃಷ್ಣ, ದೇವಕಿ ಕೃಷ್ಣ, ಯಶೋದ ಕೃಷ್ಣ, ವಸುದೇವ ಕೃಷ್ಣ... ಹೀಗೆ ವಿವಿಧ ರೀತಿಯ ಕೃಷ್ಣಂದಿರು ಅಲ್ಲಿ ಕಾಣ ಸಿಕ್ಕಿದರು.
ಶ್ರೀ ಕೃಷ್ಣ ಪರಮಾತ್ಮನ ಚರಿತ್ರೆ ನೆನಪಿಸುವ ಹಾಗೂ ಇಂದಿನ ಮಕ್ಕಳಿಗೆ ಕೃಷ್ಣನ ಬಗ್ಗೆ ತಿಳಿಯಲಿ ಅನ್ನೋ ನಿಟ್ಟಿನಲ್ಲಿ ಸಂಘಟಕರು ಈ ಕಾರ್ಯಕ್ರಮ ಆಯೋಜಿಸಿದ್ದರು. ಒಂದು ತಿಂಗಳ ಕಂದಮ್ಮಗಳಿಂದ ಹಿಡಿದು ಯಾವುದೇ ವಯೋಮಾನದ ನಿರ್ಬಂಧವಿಲ್ಲದೆ 3 ಸಾವಿರಕ್ಕೂ ಅಧಿಕ ಸ್ಪರ್ಧಾಳುಗಳು ಭಾಗವಹಿಸಿದ್ದು ವಿಶೇಷವಾಗಿತ್ತು.
ಜಿಲ್ಲೆ, ರಾಜ್ಯ- ದೇಶದೆಲ್ಲೆಡೆಯ ಮಂಗಳೂರಿಗರು ಈ ಸಮಯ ಆಗಮಿಸಿ ಈ ಕೃಷ್ಣ ವೇಷ ಸ್ಫರ್ಧೆಯಲ್ಲಿ ತಮ್ಮ ಮಕ್ಕಳನ್ನು ತೊಡಗಿಸಿಕೊಳ್ಳುತ್ತಾರೆ. ಕೆಲವರು ಸ್ಫರ್ಧೆಗಾಗಿ ಭಾಗವಹಿಸಿದರೆ ಇನ್ನು ಕೆಲವು ಮಕ್ಕಳ ಹೆತ್ತವರು ಹರಕೆ ರೂಪದಲ್ಲಿ ಮಕ್ಕಳಿಗೆ ಕೃಷ್ಣ ವೇಷ ಹಾಕಿಸುತ್ತಾರೆ. ಮಕ್ಕಳಾಗದವರು ತಮಗೆ ಮಕ್ಕಳಾದರೆ ಇಲ್ಲಿ ಕೃಷ್ಣವೇಷ ಹಾಕಿಸುತ್ತೇವೆ ಎಂದು ಹರಕೆ ಹೊತ್ತು ವೇಷ ಹಾಕಿಸಿದ್ದಾರೆ.
9 ವೇದಿಕೆಯಲ್ಲಿ 33 ವಿಭಾಗಗಳಲ್ಲಿ ಸ್ಪರ್ಧೆ ನಡೆಯಿತು. ಎಲ್ಲ ವಿಭಾಗದಲ್ಲೂ ಬಹುಮಾನ ಹಾಗೂ ಭಾಗವಹಿಸಿದ ಎಲ್ಲ ಮಕ್ಕಳಿಗೂ ಸಮಾಧಾನಕರ ಬಹುಮಾನ ನೀಡಲಾಯಿತು. "ಶ್ರೀಕೃಷ್ಣೋತ್ಸವ" ನೋಡಲು ಜಾತ್ರೆಯಂತೆ ಜನ ಸೇರಿದ್ದರು.
PublicNext
19/08/2022 06:59 pm