PublicNext special story
ಮಂಗಳೂರು:ಹಿಂದೂ-ಮುಸ್ಲಿಂ ಸಂಘರ್ಷದ ಮಧ್ಯೆಯೂ ತುಳುವರ ಆರಾಧ್ಯ ದೈವಗಳು ಮಸೀದಿಗೆ ಭೇಟಿ ನೀಡಿ ಮುಸ್ಲಿಂ ಬಾಂಧವರನ್ನ ಸಾಂಪ್ರದಾಯಿಕವಾಗಿ ಜಾತ್ರೋತ್ಸವಕ್ಕೆ ಆಹ್ವಾನಿಸಿದೆ.
ಮಂಗಳೂರಿನ ಕರ್ನಾಟಕ-ಕೇರಳ ಗಡಿ ಭಾಗದ ಉದ್ಯಾವರ ಅರಸು ಮಂಜಿಷ್ಣಾರ್ ಕ್ಷೇತ್ರದ ಜಾತ್ರೆಯ ಪೂರ್ವಭಾವಿಯಾಗಿ ಉದ್ಯಾವರ ಸಾವಿರ ಜಮಾಅತ್ ಮಸೀದಿಗೆ ದೈವಗಳ ಭೇಟಿ ವಾಡಿಕೆ. ಹಿಂದೂ ಮುಸ್ಲಿಂ ಭಾವೈಕ್ಯದ ಸಂಕೇತದೊಂದಿಗೆ ಕಳೆದ 800 ವರ್ಷಗಳಿಂದ ವಾಡಿಕೆಯಲ್ಲಿರುವ ಸಂಪ್ರದಾಯದಂತೆ ಅರಸು ದೈವ ಪಾತ್ರಿಗಳು ಮತ್ತು ದೇವಸ್ಥಾನದ ಪ್ರತಿನಿಧಿಗಳು ಹಾಗೂ ಸಹಸ್ರಾರು ಹಿಂದೂ ಬಾಂಧವರು ಮಸೀದಿಗೆ ಭೇಟಿ ನೀಡಿದ್ದಾರೆ.
ವಾರ್ಷಿಕ ಜಾತ್ರೋತ್ಸವದ ಅಂಗವಾಗಿ ಪ್ರಾಚೀನ ಕಾಲದಿಂದಲೇ ಆಚರಿಸಿಕೊಂಡು ಬಂದಿರುವ ಸಂಪ್ರದಾಯ ಇದಾಗಿದ್ದು, ಉದ್ಯಾವರ ಕ್ಷೇತ್ರದ ಭಂಡಾರ ಮನೆಯಿಂದ ಹೊರಟ ದೈವಗಳು ಮಸೀದಿ ಭೇಟಿ ಮಾಡಿವೆ. ಮಸೀದಿಯ ಆಡಳಿತ ಸಮಿತಿ ಪ್ರತಿನಿಧಿಗಳು ಹಾಗೂ ಸಹಸ್ರಾರು ಮುಸ್ಲಿಂ ಬಾಂಧವರು ಪರಂಪರಾಗತ ರೀತಿಯಲ್ಲಿ ಉದ್ಯಾವರ ಅರಸು ದೈವ ಪಾತ್ರಿಗಳಿಗೆ ಅದ್ದೂರಿ ಸ್ವಾಗತ ಕೋರಿದ್ದಾರೆ.
ಜಮಾಅತ್‌ನೊಳಗೆ ಪ್ರವೇಶಿಸಿದ ದೈವ ಪಾತ್ರಿಗಳು ಮುಸ್ಲಿಂ ಬಾಂಧವರಿಗೆ ಜಾತ್ರೋತ್ಸವಕ್ಕೆ ಆಹ್ವಾನ ನೀಡಿದ್ದಾರೆ. ಮೇ 9 ರಿಂದ 15 ರ ತನಕ ಮಾಡ ಕ್ಷೇತ್ರದ ಉತ್ಸವಕ್ಕೆ ಸಾವಿರ ಜಮಾಅತ್ ಗೆ ಆಹ್ವಾನ ನೀಡಲಾಗಿದೆ. ನೇಮೋತ್ಸವದ ದಿನ ಜಮಾಅತ್‌ನ ಮುಖ್ಯಸ್ಥರಿಗೆ ಕೂರಲು ದೇವಸ್ಥಾನದ ಕಟ್ಟೆಯಲ್ಲಿ ವಿಶೇಷವಾದ ಸ್ಥಳವನ್ನು ಕೂಡ ನೀಡಲಾಗುತ್ತದೆ. ದೈವಗಳು ಆಶೀರ್ವದಿಸಿದ ಮಲ್ಲಿಗೆ ಹೂವುಗಳನ್ನು ಜಮಾಅತ್‌ನವರಿಗೆ ನೀಡುವುದು ಕೂಡ ಇಲ್ಲಿನ ಸಂಪ್ರದಾಯ. ಕರಾವಳಿಯಲ್ಲಿ ಧರ್ಮದಂಗಲ್ ಮುಂದುವರೆದರೂ ತುಳು ಭಾಷಿಗರೇ ಹೆಚ್ಚಾಗಿರುವ ಗಡಿ ಭಾಗದಲ್ಲಿ ಹಿಂದೂ-ಮುಸ್ಲಿಂ ಭಾವೈಕ್ಯತೆ ಮುಂದುವರೆದಿದೆ.
PublicNext
23/04/2022 06:35 pm