ಉಡುಪಿ: ಸಾವಿರಾರು ಹಣತೆಗಳ ಬೆಳಕಿನಲ್ಲಿ ಉಡುಪಿಯ ರಥಬೀದಿಯಲ್ಲಿ ಶ್ರೀಕೃಷ್ಣ ಮುಖ್ಯಪ್ರಾಣ, ಶ್ರೀ ಅನಂತೇಶ್ವರ, ಶ್ರೀ ಚಂದ್ರಮೌಳೀಶ್ವರ ಉತ್ಸವ ಮೂರ್ತಿಗಳನ್ನು ಹೊತ್ತ ರಥಗಳ ಉತ್ಸವ ನಿನ್ನೆ ರಾತ್ರಿ ಆರಂಭಗೊಂಡಿತ್ತು.
ಚಾತುರ್ಮಾಸ್ಯ ವ್ರತ ಕೊನೆಗೊಂಡು ಉತ್ಸವ ಆರಂಭವಾಗುವ ದಿನವಿದು.
ನಿನ್ನೆಯಿಂದ ಆರಂಭವಾಗಿ ನ.19ರ ವರೆಗೆ ಲಕ್ಷದೀಪೋತ್ಸವ ನಡೆಯಲಿದೆ.
ನ. 5 ರಂದು ಬಲಿಪಾಡ್ಯದಿಂದ ಆರಂಭಗೊಂಡ ತುಳಸೀಪೂಜೆ ನಿನ್ನೆ ಮುಕ್ತಾಯಗೊಂಡಿತು.
ಶ್ರೀ ಕೃಷ್ಣಮಠದಲ್ಲಿ ಉತ್ಥಾನ ದ್ವಾದಶಿಯಂದು ದೇವರು ಗರ್ಭಗುಡಿಯಿಂದ ಹೊರಬಂದು ತೆಪ್ಪೋತ್ಸವದೊಂದಿಗೆ ಲಕ್ಷದೀಪೋತ್ಸವ ನಡೆಯುವುದು ಸಂಪ್ರದಾಯ. ಅದರಂತೆ ಸಾವಿರಾರು ಮಂದಿ ಭಕ್ತರು ಈ ಸಂದರ್ಭ ದೀಪ ಬೆಳಗಿಸಿದರು. ಇದೇ ವೇಳೆ ದೇವರ ಮೂರ್ತಿಯನ್ನು ರಥದಲ್ಲಿರಿಸಿ ರಥಬೀದಿಯಲ್ಲಿ ಪ್ರದಕ್ಷಿಣೆ ಹಾಕಲಾಯಿತು. ದೂರದೂರಿನಿಂದ ಆಗಮಿಸಿದ್ದ ಶ್ರೀ ಕೃಷ್ಣ ಭಕ್ತರು ದೀಪ ಬೆಳಗಿಸಿ ರಥ ಎಳೆದು ಸಂಭ್ರಮಿಸಿದರು.
ಅದಕ್ಕೂ ಮುನ್ನ ಪರ್ಯಾಯ ಶ್ರೀ ಅದಮಾರು ಮಠಾಧೀಶರಾದ ಶ್ರೀ ವಿಶ್ವಪ್ರಿಯ ತೀರ್ಥರು ತುಳಸಿ ಪೂಜೆ ನೆರವೇರಿಸಿದರು.
ಪರ್ಯಾಯ ಪೀಠಾಧೀಶರಾದ ಶ್ರೀಈಶಪ್ರಿಯತೀರ್ಥ ಶ್ರೀಪಾದರು, ಕೃಷ್ಣಾಪುರ ಮಠಾಧೀಶರಾದ ಶ್ರೀವಿದ್ಯಾಸಾಗರ ತೀರ್ಥ ಶ್ರೀಪಾದರು, ಪಲಿಮಾರು ಮಠಾಧೀಶರಾದ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು, ಪೇಜಾವರ ಮಠಾಧೀಶರಾದ ಶ್ರೀವಿಶ್ವಪ್ರಸನ್ನತೀರ್ಥ ಶ್ರೀಪಾದರು,ಕಾಣಿಯೂರು ಮಠಾಧೀಶರಾದ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರು ಹಾಗೂ ಪಲಿಮಾರು ಕಿರಿಯ ಮಠಾಧೀಶರಾದ ಶ್ರೀ ವಿದ್ಯಾರಾಜೇಶ್ವರತೀರ್ಥ ಶ್ರೀಪಾದರು ಭಾಗಿಯಾದರು.
Kshetra Samachara
17/11/2021 10:30 pm