ವರದಿ: ರಹೀಂ ಉಜಿರೆ
ಕಟಪಾಡಿ: ನವರಾತ್ರಿ ಸಂದರ್ಭ ಹಳೆ ಮೈಸೂರು, ಕೇರಳ, ತಮಿಳುನಾಡು, ಆಂಧ್ರಪ್ರದೇಶಗಳಲ್ಲಿ ಕಂಡು ಬರುವ ಗೊಂಬೆ ಆರಾಧನೆಯು ಉದ್ಯಾವರ ಆರೂರು ತೋಟದಲ್ಲಿ ನಡೆಯುತ್ತಿದೆ.
ಸಿಂಡಿಕೇಟ್ ಬ್ಯಾಂಕ್ ಉದ್ಯೋಗಿಯಾಗಿದ್ದ ಯು. ವಾಸುದೇವ ಭಟ್ ಇದರ ರೂವಾರಿ. 1972ರಲ್ಲಿ ಪ್ರಾರಂಭಗೊಂಡ ಈ ಸಂಪ್ರದಾಯಕ್ಕೆ ಈ ವರ್ಷ ಸುವರ್ಣ ಸಂಭ್ರಮ.
ಹೈದರಾಬಾದ್ ನಲ್ಲಿ ವಾಸುದೇವ ಭಟ್ ಅವರ ತಂದೆಯಿಂದ ಈ ಸಂಪ್ರದಾಯ ಆರಂಭವಾಯಿತು. ಈಗ ನಾಲ್ಕನೇ ಪೀಳಿಗೆ ಪೂಜಾಕೈಂಕರ್ಯ ದಲ್ಲಿ ಮುಂದುವರೆಯುತ್ತಿದೆ.
ಆರಾಧನಾ ಪದ್ಧತಿ ಆರಂಭಿಸಿ 50 ವರ್ಷಗಳು ತುಂಬುತ್ತಿದ್ದು, ಅದಕ್ಕಾಗಿಯೇ ವಿಶೇಷವಾಗಿ ಕಲಾವಿದರು ನಿರ್ಮಿಸಿದ ಕನಕ ಗೋಪುರ, ಕನಕನ ಕಿಂಡಿ, ಶ್ರೀ ಕೃಷ್ಣ ಮಠ, ರಥವನ್ನು ನಿರ್ಮಿಸಿ ಕನಕನ ಕಿಂಡಿಯ ಮೂಲಕ ಶ್ರೀ ಕೃಷ್ಣ ಮುಖ್ಯಪ್ರಾಣನ ದರ್ಶನ ಭಾಗ್ಯ, ಅದರ ಮುಂಭಾಗದಲ್ಲಿ ರಂಗವಲ್ಲಿ ಕಲೆಯ ಮೂಲಕ ಆಚಾರ್ಯ ಮಧ್ವರು ಶ್ರೀ ಕೃಷ್ಣನ ವಿಗ್ರಹವನ್ನು ಹಿಡಿದ ಮಾದರಿ ಆಕರ್ಷಕವಾಗಿದೆ.
ನವರಾತ್ರಿಯಲ್ಲಿ ದುರ್ಗೆಯ ಬೊಂಬೆಯನ್ನು ಇರಿಸಿ ಪೂಜಿಸಿ ಸಂಜೆ ಮಹಿಳೆಯರು ಭಜನೆಯೊಂದಿಗೆ ಆರತಿ ಬೆಳಗಿಸುತ್ತಾರೆ. ವಿದ್ಯಾರ್ಥಿಗಳು, ಸಾರ್ವಜನಿಕರು ಇದನ್ನು ನೋಡಲು ಆಗಮಿಸುತ್ತಾರೆ.
ಗಣಪತಿ, ರಾಮ, ಸೀತೆ, ಲಕ್ಷ್ಮಣ, ಅಷ್ಟ ಲಕ್ಷ್ಮಿಯರು ಸಹಿತ ವಿಶೇಷವಾಗಿ ಧರ್ಮ ಸಂದೇಶವನ್ನು ಸಾರುವಂತಹ ವಿಶ್ವ ರೂಪ ದರ್ಶನ, ರಾವಣ ದರ್ಬಾರು, ಅರಗಿನ ಅರಮನೆ, ದಶಾವತಾರ, ಗಜೇಂದ್ರ ಮೋಕ್ಷ ಶ್ರೀ ರಾಮನ ಪಟ್ಟಾಭಿಷೇಕ, ಶರಶಯ್ಯ ವಿಶೇಷವಾಗಿ ಗಮನ ಸೆಳೆಯುತ್ತಿವೆ.
ರಷ್ಯಾ, ಕೌಲಾಲಂಪುರ, ಮಲೇಷ್ಯಾ, ದುಬೈ ಸಹಿತ ವಿದೇಶದಲ್ಲಿಯೂ ಖರೀದಿಸಿದ ಗೊಂಬೆಗಳು ಈ ಮನೆಯಲ್ಲಿ ಆಕರ್ಷಿಸುತ್ತಿವೆ.ಅಲ್ಲಲ್ಲಿ ಖರೀದಿಸಿದ ಗೊಂಬೆಗಳು ಸೇರಿ ಈಗ ಸಾವಿರಕ್ಕೂ ಮೀರಿವೆ.
PublicNext
30/09/2022 06:38 pm