ಮಂಗಳೂರಿನ ಮಣಿ ಕೃಷ್ಣಸ್ವಾಮಿ ಅಕಾಡಮಿ ಆನ್‌ಲೈನ್ ಮೂಲಕ 500 ಸಂಗೀತ ಕಛೇರಿಗಳನ್ನು ಪೂರೈಸಿದೆ ಎಂದು ಕಾರ್ಯದರ್ಶಿ ನಿತ್ಯಾನಂದ ರಾವ್ ಹೇಳಿದ್ದಾರೆ. ಮಂಗಳೂರಿನ ಖಾಸಗಿ ಹೊಟೇಲ್ ನಲ್ಲಿ ಮಾತನಾಡಿದ ಅವರು, ಕೊರೊನಾ ಮಧ್ಯೆ ಈ ಸಂಸ್ಥೆಯು ಎಪ್ರಿಲ್ 5ರಂದು ಫೇಸ್‌ಬುಕ್ ಮೂಲಕ ಸಂಗೀತ ಕಛೇರಿಗಳನ್ನು ಪ್ರಾರಂಭಿಸಿತು.
ಪ್ರತಿದಿನವೂ ಸರಾಸರಿ 2ರಂತೆ ಸಂಗೀತ ಕಛೇರಿಗಳನ್ನು ವ್ಯವಸ್ಥೆಗೊಳಿಸುತ್ತಾ ಇದೇ ಡಿಸೆಂಬರ್ 6ರಂದು 500 ಕಾರ್ಯಕ್ರಮಗಳನ್ನು ಪೂರ್ತಿಗೊಳಿಸುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಗಳ ಕಲಾವಿದರೂ ಸೇರಿ ದೇಶ ವಿದೇಶದಿಂದ ಸುಮಾರು 600ಕ್ಕೂ ಮೀರಿ ಕಲಾವಿದರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.
86ರ ಹರೆಯದ ನೀಲಾ ರಾಮ್‌ಗೋಪಾಲ್, 10-11 ವರ್ಷ ವಯಸ್ಸಿನ ಅಮೇರಿಕದಲ್ಲಿ ನೆಲೆಸಿರುವ ನಂದನ ರಾಮಕೃಷ್ಣನ್, ಶ್ಯಾಮ್, ಸಂಗೀತದ ತಾರೆಯೆನಿಸಿಕೊಂಡಿರುವ ಡಾ ವಿದ್ಯಾಭೂಷಣ, ಚಿತ್ರವೀಣಾ ಎನ್ ರವಿಕಿರಣ್, ಗಾಯತ್ರಿ ವೆಂಕಟರಾಘವನ್, ಬಾಲಮುರಳಿ ಕೃಷ್ಣ, ನಿಶಾ ರಾಜಗೋಪಾಲ, ಪ್ರಾರ್ಥನಾ ಸಾಯಿ ನರಸಿಂಹನ್ ಮುಂತಾದವರಿಂದ ತೊಡಗಿ ಎಲ್ಲ ವಯೋಮಾನದ, ಎಲ್ಲ ವರ್ಗದ ಕಲಾವಿದರು ಭಾಗವಹಿಸಿರುವುದು ಈ ಸರಣಿ ಕಾರ್ಯಕ್ರಮದ ವಿಶೇಷತೆ.
ಈ ಸಂಸ್ಥೆಯು 8 ತಿಂಗಳ ಕಾಲ ಸತತವಾಗಿ ಸಂಗೀತ ಕಛೇರಿಯನ್ನು ನಡೆಸಿರುವ ಏಕಮಾತ್ರ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಸಂಗೀತಾಸಕ್ತರು ಫೇಸ್‌ಬುಕ್‌ನ ಫಾಲೋವರ್ಸ್ ಆಗಿದ್ದು ಪ್ರಸ್ತುತ ಈ ಸಂಖ್ಯೆ 30 ಸಾವಿರವನ್ನು ದಾಟಿದೆ.
ಸಾರ್ವಜನಿಕರಿಂದ ಆರ್ಥಿಕ ನೆರವನ್ನು ಎಪ್ರಿಲ್ 28ರಿಂದ ಕೇಳಲು ಪ್ರಾರಂಭಿಸಲಾಗಿತ್ತು. ಈ ಮನವಿಗೆ ಅತ್ಯುತ್ತಮ ರೀತಿಯಲ್ಲಿ ಪ್ರತಿಕ್ರಿಯಿಸಿದ ಆನ್‌ಲೈನ್ ಪ್ರೇಕ್ಷಕವರ್ಗ ಇಲ್ಲಿಯ ತನಕ ಸುಮಾರು 15 ಲಕ್ಷ ರೂ ಗಳನ್ನು ಸಹಾಯಧನವಾಗಿ ನಮಗೆ ನೀಡಿದೆ.
ಇದರಲ್ಲಿ ಶೇಕಡಾ 50 ಕಾರ್ಯಕ್ರಮ ನೀಡಿದ ಕಲಾವಿದರಿಗೆ ಸಂಭಾವನೆಯಾಗಿ ನೀಡಲಾಗ್ತಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಗೌರವಾಧ್ಯಕ್ಷರಾದ ಧರ್ಮದರ್ಶಿ ಹರಿಕೃಷ್ಣ ಪುನರೂರು, ಖಜಾಂಚಿ ಆನಂದ ರಾವ್, ಗೌರವ ಸಲಹಾ ಮಂಡಳಿ ಸದಸ್ಯರಾದ ನಾಗೇಶ್ ಎ ಬಪ್ಪನಾಡು ಉಪಸ್ಥಿತರಿದ್ದರು.
Kshetra Samachara
04/12/2020 02:47 pm