ಬಂಟ್ವಾಳ: ಕೋಟಿ- ಚೆನ್ನಯರ ಚರಿತ್ರೆಗೆ ಚ್ಯುತಿ ಬಾರದಂತೆ ಬ್ರಹ್ಮಕಲಶೋತ್ಸವವನ್ನು ಪಡುಮಲೆ ಕೋಟಿ -ಚೆನ್ನಯ ಜನ್ಮಸ್ಥಾನ ಸಂಚಲನಾ ಸೇವಾ ಸಮಿತಿ ಟ್ರಸ್ಟ್ ವತಿಯಿಂದ ಅಭಿವೃದ್ಧಿಗೊಳ್ಳುತ್ತಿರುವ ಪಡುಮಲೆ ಕ್ಷೇತ್ರದಲ್ಲಿ ನಡೆಸಲಿದ್ದು, ಇದನ್ನು ಭಾರತೀಯ ಸಮಾಜಕ್ಕೆ ಅರ್ಪಣೆ ಮಾಡಲಿದ್ದೇವೆ ಎಂದು ಟ್ರಸ್ಟ್ ಅಧ್ಯಕ್ಷ ಕೆ.ಹರಿಕೃಷ್ಣ ಬಂಟ್ವಾಳ್ ಹೇಳಿದ್ದಾರೆ.
ಬಂಟ್ವಾಳದ ಗಾಣದಪಡ್ಪುವಿನ ಬ್ರಹ್ಮಶ್ರೀ ನಾರಾಯಣಗುರು ಸಭಾಂಗಣದಲ್ಲಿ ಶನಿವಾರ ಸಂಜೆ ನಡೆದ ಬಂಟ್ವಾಳ ತಾಲೂಕಿನ ಪ್ರಮುಖರ ಸಮಾಲೋಚನೆ ಸಭೆಯಲ್ಲಿ ಮಾತನಾಡಿದರು. ಕ್ಷೇತ್ರದ ಅಭಿವೃದ್ಧಿ ಕಾರ್ಯ ಬಹುತೇಕ ಪೂರ್ಣಗೊಂಡಿದ್ದು, ಮುಂದಿನ ಮಾರ್ಚ್ ಅಂತ್ಯ ಅಥವಾ ಏಪ್ರಿಲ್ ಪ್ರಾರಂಭದಲ್ಲಿ ಬ್ರಹ್ಮಕಲಶೋತ್ಸವ ನಡೆಸುವ ಯೋಜನೆ ಹಾಕಿಕೊಳ್ಳಲಾಗಿದೆ ಎಂದರು.
ಕ್ಷೇತ್ರದ ಮೊಕ್ತೇಸರ, ಚಿತ್ರನಟ ವಿನೋದ್ ಆಳ್ವ ಮಾತನಾಡಿ, ಕ್ಷೇತ್ರದ ಅಭಿವೃದ್ಧಿಗಾಗಿ ಕಳೆದ ಹಲವು ವರ್ಷಗಳಿಂದ ಪ್ರಯತ್ನ ನಡೆಸಿ ಎಲ್ಲರನ್ನೂ ಜತೆ ಸೇರಿಸಿ ಈ ಕಾರ್ಯ ಮಾಡಲಾಗಿದೆ ಎಂದರು. ಸಮಿತಿ ಪ್ರಮುಖರಾದ ಚರಣ್ ಕೆ. ಮಾತನಾಡಿ, ಜನವರಿ 14ರಂದು ಕ್ಷೇತ್ರದ ಕಚೇರಿ ಹಾಗೂ ಅತಿಥಿ ಗೃಹ ಉದ್ಘಾಟನೆಗೊಳ್ಳಲಿದೆ ಎಂದು ಹೇಳಿದರು.
ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಸೇಸಪ್ಪ ಕೋಟ್ಯಾನ್ ಪಚ್ಚಿನಡ್ಕ, ಪ್ರಮುಖರಾದ ಬೆಳ್ತಂಗಡಿಯ ಯೋಗೀಶ್ ಕುಮಾರ್ ನಡಕ್ಕರ್, ಪುತ್ತೂರಿನ ವಿಜಯಕುಮಾರ್ ಸೊರಕೆ, ಮಂಗಳೂರಿನ ಬಿ.ಪಿ. ದಿವಾಕರ್, ಪಂಜಿಕಲ್ಲು ಗರೋಡಿ ಆಡಳಿತದಾರ ಬಿ.ಪ್ರಕಾಶ್ ಜೈನ್ ಉಪಸ್ಥಿತರಿದ್ದರು.
ಇದೇ ವೇಳೆ ಮಂಗಳೂರಿನ ಬಿಲ್ಲವ ಸಂಘ ಉರ್ವ – ಅಶೋಕನಗರ ವತಿಯಿಂದ ಬಿ.ಪಿ.ದಿವಾಕರ್ ನೇತೃತ್ವದಲ್ಲಿ ದೇಣಿಗೆ ನೀಡಲಾಯಿತು. ನಾನಾ ಕ್ಷೇತ್ರಗಳ ಮುಖಂಡರು ಉಪಸ್ಥಿತರಿದ್ದರು.
Kshetra Samachara
16/11/2020 11:26 am