ಮುಲ್ಕಿ: ಸಮಾಜದ ಅನರ್ಘ್ಯ ರತ್ನ ಜಯ ಸಿ.ಸುವರ್ಣರ ಆದರ್ಶ ನಮಗೆ ದಾರಿದೀಪ. ಅವರು ಬಿಟ್ಟುಹೋದ ಘನ ಕಾರ್ಯ ಮುಂದುವರಿಸುವ ಮೂಲಕ ಸಂಘಟಿತರಾಗಿ ಅಭಿವೃದ್ಧಿ ಕಡೆಗೆ ಗಮನ ಹರಿಸೋಣ ಎಂದುಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.ಹೆಜಮಾಡಿಯ ಬಿಲ್ಲವ ಸಮಾಜ ಸೇವಾ ಸಂಘದ ಜಯ ಸಿ.ಸುವರ್ಣ ಸಭಾಂಗಣದಲ್ಲಿ ಗುರುವಾರ ನಡೆದ ಜಯ ಸಿ.ಸುವರ್ಣ ಶ್ರದ್ಧಾಂಜಲಿ ಸಭೆಯಲ್ಲಿ ನುಡಿನಮನ ಸಲ್ಲಿಸಿದರು.
ಸಮಾನತೆ, ಸತ್ಯ, ನ್ಯಾಯ, ಧರ್ಮ ಪರಿಪಾಲಕ ಜಯ ಸಿ. ಸುವರ್ಣರ ಹೆಸರಲ್ಲಿ ಬಹು ದೊಡ್ಡ ಕೆಲಸವಾಗಬೇಕಿದೆ ಎಂದು ಮೂಡುಬಿದಿರೆ ಆಳ್ವಾಸ್ ಸಮೂಹ ಶೈಕ್ಷಣಿಕ ಸಂಸ್ಥೆಗಳ ಮುಖ್ಯಸ್ಥ ಡಾ. ಎಂ.ಮೋಹನ ಆಳ್ವ ಹೇಳಿದರು.ಕಾರ್ಕಳ ಶಾಸಕ ಸುನಿಲ್ ಕುಮಾರ್ ಮಾತನಾಡಿ, ಜಯ ಸುವರ್ಣರು ಬದುಕಿದ್ದು ಸಮಾಜಕ್ಕೋಸ್ಕರ. ಅವರ ಕನಸುಗಳನ್ನು ನನಸು ಮಾಡುವ ಮೂಲಕ ಅವರಿಗೆ ಗೌರವ ಸಲ್ಲಿಸೋಣ ಎಂದರು.ದ.ಕ.ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಮಾತನಾಡಿ, ಜಯ ಸುವರ್ಣರ ಘನ ಕಾರ್ಯಗಳು ಜನರ ಮನಸ್ಸಲ್ಲಿ ಶಾಶ್ವತವಾಗಿರಲಿದೆ ಎಂದರು.
ಮಾಜಿ ಸಚಿವ ವಿನಯಕುಮಾರ್ ಸೊರಕೆ ನುಡಿನಮನ ಸಲ್ಲಿಸಿ, ಸಾಮಾಜಿಕ ಪರಿವರ್ತನೆಯ ಪರಿಪಾಲಕ ಜಯ ಸುವರ್ಣರ ಅದರ್ಶ ನಮಗೆ ದಾರಿದೀಪ ಎಂದರು.ಮಾಜಿ ಸಚಿವ ರಮಾನಾಥ ರೈ ಮಾತನಾಡಿ, ಮುಂಬೈಯಲ್ಲಿ ಎತ್ತರದ ಸ್ಥಾನಕ್ಕೇರಿದ್ದ ಅವರು ಊರಿನ ಬಡ ಜನರ ಏಳಿಗೆಗಾಗಿ ಅವಿರತ ಶ್ರಮಿಸಿದ್ದರು ಎಂದರು.ಮಧು ಬಂಗಾರಪ್ಪ ಮಾತನಾಡಿ, ದಿವಂಗತರ ಸಮಾಜ ಸೇವೆ ಒಗ್ಗಟ್ಟಾಗಿ ಮುಂದುವರಿಸೋಣ ಎಂದರು.
ಮಾಜಿ ಸಚಿವ ಕೆ.ಅಭಯಚಂದ್ರ ಜೈನ್ ಮಾತನಾಡಿ, ಶ್ರಮಜೀವಿಯಾಗಿದ್ದ ಜಯ ಸುವರ್ಣ ರು ಸಹಸ್ರಾರು ಮಂದಿಗೆ ಉದ್ಯೋಗದಾತರಾಗಿದ್ದರು ಎಂದರು.ಮುಲ್ಕಿ-ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್, ಮಾಜಿ ಸಚಿವರಾದ ಯು.ಟಿ.ಖಾದರ್, ಪ್ರಮೋದ್ ಮಧ್ವರಾಜ್ ಮತ್ತು ಕೃಷ್ಣ ಜೆ.ಪಾಲೆಮಾರ್, ಐವನ್ ಡಿಸೋಜ, ಕೆ.ಹರೀಶ್ ಕುಮಾರ್, ಮಾಜಿ ಶಾಸಕ ಮೊಯಿದೀನ್ ಬಾವ, ಸಾಯಿರಾಧಾ ಗ್ರೂಪ್ಸ್ ನ ಮನೋಹರ ಶೆಟ್ಟಿ, ಕುದ್ರೋಳಿ ಕ್ಷೇತ್ರದ ಪದ್ಮರಾಜ್, ರಾಷ್ಟ್ರೀಯ ಬಿಲ್ಲವರ ಮಹಾಮಂಡಲ ಅಧ್ಯಕ್ಷ ರಾಜಶೇಖರ ಕೋಟ್ಯಾನ್, ಭಾರತ್ ಬ್ಯಾಂಕ್ ಮಾಜಿ ಅಧ್ಯಕ್ಷ ವಾಸುದೇವ ಕೋಟ್ಯಾನ್ ಮತ್ತಿತರರು ನುಡಿನಮನ ಸಲ್ಲಿಸಿದರು.
Kshetra Samachara
05/11/2020 05:05 pm