ಮುಲ್ಕಿ: ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇಗುಲದಲ್ಲಿ ಭಾನುವಾರ ಮಹಾನವಮಿ ಹಾಗೂ ಸೋಮವಾರ ವಿಜಯದಶಮಿಯಂದು ಸುಮಾರು ಎಂಟು ಸಾವಿರ ಹೂವಿನ ಪೂಜೆ, ನೂರೈವತ್ತು ಮಕ್ಕಳ ಅಕ್ಷರಾಭ್ಯಾಸ, ಒಂದು ಸಾವಿರದಷ್ಟು ವಾಹನಗಳ ಪೂಜೆ ನಡೆದಿದೆ.
ಭಾನುವಾರ ಸುಮಾರು 25 ಸಾವಿರಕ್ಕೂ ಮಿಕ್ಕಿ ಭಕ್ತರು ಭೇಟಿ ನೀಡಿದ್ದರೆ, ಸೋಮವಾರ ಈ ಸಂಖ್ಯೆ ಕಡಿಮೆಯಾಗಿತ್ತು.
ಮಹಾನವಮಿಯಂದು ಸುಮಾರು ಐನೂರಕ್ಕೂ ಹೆಚ್ಚು ಆರತಿಗಳಿಂದ ಎರಡು ಗಂಟೆಗಳ ಕಾಲ ಮಹಾರಂಗಪೂಜೆ ನಡೆಯಿತು.
ಚಂಡಿಕಾಹೋಮ ಇತ್ಯಾದಿ ಸೇವೆಗಳಲ್ಲಿ ಭಕ್ತರು ಪಾಲ್ಗೊಂಡರು. ಕಟೀಲಿನಲ್ಲಿ ಭಾರೀ ಜನ ಸಂದಣಿ ಇದ್ದರೂ ರಥಬೀದಿಯಲ್ಲಿ ಯಾವುದೇ ನೂಕುನುಗ್ಗಲು ಕಂಡುಬಂದಿಲ್ಲ. ಆದರೆ, ದೇವಳದ ಒಳಗಡೆ ಹೋಗಲು ಭಕ್ತರು ಸರತಿ ಸಾಲಿನಲ್ಲಿ ತ್ರಾಸ ಪಡಬೇಕಾಯಿತು.
ಕೊರೊನಾ ಬಗ್ಗೆ ಕಟೀಲು ಕ್ಷೇತ್ರದಲ್ಲಿ ತೀವ್ರ ಎಚ್ಚರಿಕೆ ವಹಿಸಿದ್ದು, ಎಲ್ಲಾ ಭಕ್ತರನ್ನು ಪರೀಕ್ಷಿಸುವ ಮುಖಾಂತರ ದೇವರ ದರ್ಶನಕ್ಕೆ ಬಿಡಲಾಗುತ್ತಿತ್ತು.
Kshetra Samachara
26/10/2020 08:12 pm