ಮಂಗಳೂರು: ಬಹುಜನ ಚಳುವಳಿಯ ನೇತಾರ ಪಿ.ಡೀಕಯ್ಯ ಅವರ ಸಾವು ಅಸಹಜವಾಗಿದ್ದು, ಡಿಕಯ್ಯರ ಪತ್ನಿ ಅತ್ರಾಡಿ ಅಮೃತಾ ಶೆಟ್ಟಿ, ಪತ್ನಿಯ ತಂಗಿಯ ಮೇಲೆ ತಮಗೆ ಅನುಮಾನ ವ್ಯಕ್ತವಾಗಿದೆ. ಈ ಬಗ್ಗೆ ತಕ್ಷಣ ಅವರ ಮೇಲೆ ಪ್ರಕರಣ ದಾಖಲಿಸಿ, ಕೂಲಂಕಷವಾಗಿ ತನಿಖೆ ನಡೆಸಿ ಕ್ರಮ ಜರುಗಿಸಬೇಕೆಂದು ದ.ಕ.ಜಿಲ್ಲೆಯ ಜನಪರ ಸಂಘಟನೆಗಳು ಆಗ್ರಹಿಸಿದೆ.
ಈ ಬಗ್ಗೆ ಪಿ.ಡೀಕಯ್ಯ ಅವರ ಭಾವ ಲೋಲಾಕ್ಷ ಮಾತನಾಡಿ, ಡೀಕಯ್ಯ ಅವರು ಜುಲೈ 6ರಂದು ಬಿಪಿ ಹೆಚ್ಚಾಗಿ ಮೆದುಳಿನ ರಕ್ತಸ್ರಾವವಾಗಿ ಬೆಳ್ತಂಗಡಿಯ ಗರ್ಡಾಡಿಯ ತಮ್ಮ ಮನೆಯಲ್ಲಿಯೇ ಕುಸಿದು ಬಿದ್ದಿದ್ದಾರೆ. ತಕ್ಷಣ ತಾವು ಮಣಿಪಾಲದ ಆಸ್ಪತ್ರೆಗೆ ದಾಖಲಿಸಿದ್ದೇವೆ ಎಂದು ಡೀಕಯ್ಯರ ಪತ್ನಿ ಅಮೃತಾ ಶೆಟ್ಟಿ ತಿಳಿಸಿದ್ದಾರೆ. ಆದರೆ ಅವರ ತಲೆಯ ಭಾಗದಲ್ಲಿ ಬಲವಾಗಿ ಬಿದ್ದಿರುವ ಏಟಿನ ಬಗ್ಗೆ ಎಲ್ಲೂ ತಿಳಿಸಿಲ್ಲ. ಅಲ್ಲದೆ ಅವರ ಮೆದುಳು ನಿಷ್ಕ್ರಿಯಗೊಂಡ ಹಿನ್ನೆಲೆಯಲ್ಲಿ ಅಂಗಾಂಗ ದಾನ ಮಾಡಲಾಗಿದೆ ಎಂದು ಹೇಳಲಾಗಿದೆ. ಆದರೆ ಅವರ ಕಣ್ಣುಗಳ ಹೊರತಾಗಿ ಬೇರೆ ಯಾವ ಅಂಗಾಂಗವನ್ನೂ ದಾನ ಮಾಡಲಾಗಿಲ್ಲ ಎಂದು ಹೇಳಿದರು.
ಮೃತದೇಹವನ್ನು ಸ್ನಾನ ಮಾಡಿಸಬಾರದು, ಮೂರು ಗಂಟೆಗಳೊಳಗೆ ದಫನ ಕಾರ್ಯ ಮಾಡಬೇಕೆಂದು ಅತ್ರಾಡಿ ಅಮೃತಾ ಶೆಟ್ಟಿ ಹಾಗೂ ಅವರ ತಂಗಿ ವನಿತಾ ಶೆಟ್ಟಿ ಒತ್ತಾಯಿಸಿರುವ ಹಿನ್ನೆಲೆಯಲ್ಲಿ ಆತುರ ಆತುರವಾಗಿ ದಫನ ಕಾರ್ಯ ಮಾಡಲಾಗಿದೆ. ಅಲ್ಲದೆ ಆಸ್ಪತ್ರೆಯವರು ಮೃತದೇಹದ ಮರಣೋತ್ತರ ಪರೀಕ್ಷೆಯನ್ನು ಮಾಡಿಲ್ಲ. ಈ ಬಗ್ಗೆ ನಾವು ಅನುಮಾನಗೊಂಡು ಮಣಿಪಾಲ ಆಸ್ಪತ್ರೆಯ ವೈದ್ಯರಲ್ಲಿ ಮಾತನಾಡಿದಾಗ ಅವರು ವಿನಾಕಾರಣ ನಮ್ಮ ಮೇಲೆ ರೇಗಾಡಿದ್ದಾರೆ. ಡೀಕಯ್ಯ ಅವರು ಬಲವಾದ ಹೊಡೆತ ಬಿದ್ದ ಪರಿಣಾಮ ತಲೆಗೆ ಗಾಯವಾಗಿ ಮೃತಪಟ್ಟಿದ್ದಾರೆ ಎಂಬುದು ನಮ್ಮ ಅನುಮಾನ. ಈ ಬಗ್ಗೆ ನಾವು ಬೆಳ್ತಂಗಡಿ ಠಾಣೆಯಲ್ಲಿ ದೂರು ದಾಖಲಿಸಿದ್ದರೂ ಇನ್ನೂ ಎಫ್ಐಆರ್ ದಾಖಲಾಗಿಲ್ಲ ಎಂದು ಹೇಳಿದರು.
ಇನ್ನಾದರೂ ಪೊಲೀಸರು ಈ ಬಗ್ಗೆ ಕೂಲಂಕಷವಾಗಿ ತನಿಖೆ ನಡೆಸಿ ಇದರ ಹಿಂದಿನ ಆರೋಪಿಗಳನ್ನು ಬಯಲಿಗೆಳೆಯಬೇಕು. ಇಲ್ಲದಿದ್ದಲ್ಲಿ ನಾವು ಉಗ್ರವಾದ ಹೋರಾಟ ನಡೆಸುತ್ತೇವೆ ಎಂದು ಲೋಲಾಕ್ಷ ಅವರು ಆಗ್ರಹಿಸಿದರು.
Kshetra Samachara
19/09/2022 08:11 pm