ಮಂಗಳೂರು : ತನ್ನ ಪುತ್ರ ನಾಪತ್ತೆಯಾಗಿ ಇಂದಿಗೆ 50 ದಿನ ಕಳೆದರೂ ಇನ್ನೂ ಪತ್ತೆಯಾಗಿಲ್ಲ. ಈಗಾಗಲೇ ಪೊಲೀಸ್ ದೂರು ದಾಖಲಿಸಿದರೂ ಆತನ ಬಗ್ಗೆ ಯಾವ ಸುಳಿವೂ ಸಿಗುತ್ತಿಲ್ಲ. ಹೇಗಾದರೂ ಮಾಡಿ ಪುತ್ರನನ್ನೊಮ್ಮೆ ಪತ್ತೆ ಹಚ್ಚಿ ಎಂದು ತಂದೆಯೊಬ್ಬರು ಅವಲತ್ತುಕೊಂಡಿದ್ದಾರೆ.
ಮೂಲತಃ ಯಾದಗಿರಿ ಜಿಲ್ಲೆಯ ಆದಿತ್ಯ ವಿ. ಅಲಗೂರು (27) ಮಂಗಳೂರಿನ ಎಂಸಿಎಫ್ ಉದ್ಯೋಗಿ ಇವರು ಜು.16 ರಂದು ನಾಪತ್ತೆಯಾಗಿದ್ದಾರೆ. ಈ ಮದ್ಯೆ ಆದಿತ್ಯ ಅವರ ಸ್ಕೂಟರ್, ಮೊಬೈಲ್ ಫೋನ್ ಜು.21ರಂದು ಮರವೂರು ಸೇತುವೆಯ ಆಚೆ ಪತ್ತೆಯಾಗಿದೆ. ಕುಂಜತ್ತಬೈಲ್ ನಲ್ಲಿರುವ ಎಂಸಿಎಫ್ ಕ್ವಾಟರ್ಸ್ ನಲ್ಲಿ ತಂದೆ-ತಾಯಿ, ಸಹೋದರನೊಂದಿಗೆ ವಾಸ್ತವ್ಯವಿದ್ದ. ಆದರೆ ಜು.16ರಂದು ಸಂಜೆ ವೇಳೆಗೆ ಬರ್ಮುಡಾ, ಟಿ-ಶರ್ಟ್ ಧರಿಸಿ ಸ್ಕೂಟರ್'ನಲ್ಲಿ ಹೊರಟಿದ್ದ ಆದಿತ್ಯ ವಿ. ಅಲಗೂರು ರಾತ್ರಿ 7.30ಕ್ಕೆ ಸಹೋದರನಿಗೆ 'ತಾನು ಬರುವಾಗ ತಡವಾಗುತ್ತದೆ' ಎಂದು ಹೇಳಿದ್ದಾರೆ.
ಆದರೆ ಆ ಬಳಿಕ ಅವರ ಮೊಬೈಲ್ ಸ್ವಿಚ್ ಆಫ್ ಆಗಿ ನಾಪತ್ತೆಯಾಗಿದ್ದಾರೆ.
ಈ ಬಗ್ಗೆ ಆದಿತ್ಯ ವಿ ಅಲಗೂರು ಅವರ ತಂದೆ ವಿ.ಎಸ್.ಅಲಗೂರು ಮಾತನಾಡಿ, ತನ್ನ ಪುತ್ರ ಅಂದು ತನ್ನ ಸ್ಕೂಟರ್'ನಲ್ಲಿ ಮನೆಯಿಂದ ಕಾವೂರಿಗೆ ಹೋಗಿರುವುದು ಸಿಸಿ ಕ್ಯಾಮರಾದಲ್ಲಿ ದಾಖಲಾಗಿದೆ. ಆ ಬಳಿಕ ಆತ ಎಲ್ಲಿಗೆ ಹೋಗಿದ್ದಾನೆಂದು ತಿಳಿದಿಲ್ಲ. ಆತನಿಗೆ ಈಜಲೂ ತಿಳಿದಿದ್ದು, ಆತ್ಮಹತ್ಯೆ ಮಾಡುವುದಕ್ಕೆ ಸಾಧ್ಯವಿಲ್ಲ. ಸಹಕಾರಿ ಬ್ಯಾಂಕ್ ನಲ್ಲಿ 3.50 ಲಕ್ಷ ರೂ. ಸಾಲ ಮಾಡಿದ್ದು, ಅದು ಸಂಬಳದಲ್ಲಿ ತೀರಿಸುತ್ತಿದ್ದಾನೆ.
ನಮಗೆ ನಾಲ್ಕೈದು ಮಂದಿಯ ಮೇಲೆ ಅನುಮಾನವಿದ್ದು, ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದೇವೆ. ಇತ್ತೀಚೆಗೆ ಜಿಲ್ಲೆಯಲ್ಲಿ ನಡೆದ ಮೂರು ಹತ್ಯೆ ನಡೆದ ಸಂದರ್ಭದಲ್ಲಿಯೇ ತನ್ನ ಪುತ್ರ ನಾಪತ್ತೆಯಾಗಿದ್ದು, ಆದ್ದರಿಂದ ಪೊಲೀಸರಿಗೆ ಆತನ ಪತ್ತೆಗೆ ಮುತುವರ್ಜಿ ವಹಿಸಲು ಸಾಧ್ಯವಾಗಿರಲಿಲ್ಲ. ಆದ್ದರಿಂದ ಇನ್ನೂ ಆತ ಪತ್ತೆಯಾಗಿಲ್ಲ.ಈಗ ಮತ್ತೆ ಆತನ ಪತ್ತೆಗೆ ಪೊಲೀಸ್ ಇಲಾಖೆ ತನಿಖೆ ಕೈಗೊಂಡಿದೆ ಎಂದು ಹೇಳಿದ್ದಾರೆ.
PublicNext
11/09/2022 07:48 am