ಉಪ್ಪಿನಂಗಡಿ : ಸರಕಾರಿ ಮೀಸಲು ರಕ್ಷಿತಾರಣ್ಯದಿಂದ ಬೃಹತ್ ಗಾತ್ರದ ಕಲ್ಪಾಜಿ ಮರವನ್ನು ಕಡಿದು, ಅದನ್ನು ತುಂಡಾಗಿಸಿ, ಸಾಗಾಟಕ್ಕೆ ಸಿದ್ಧತೆ ಮಾಡಿಕೊಂಡಿದ್ದ ಪ್ರಕರಣವೊಂದನ್ನು ಉಪ್ಪಿನಂಗಡಿ ವಲಯ ಅರಣ್ಯ ಇಲಾಖೆ ಸಿಬ್ಬಂದಿಗಳು ಪತ್ತೆ ಹಚ್ಚಿ ಪ್ರಕರಣ ದಾಖಲಿಸಿ ಕೊಂಡಿದ್ದಾರೆ.
ದ.ಕ ಜಿಲ್ಲೆಯ ಉಪ್ಪಿನಂಗಡಿ ಸಮೀಪದ ಕಣಿಯೂರು ಗ್ರಾಮದ ಮಲೆಂಗಲ್ಲು ಮೀಸಲು ರಕ್ಷಿತಾರಣ್ಯದಿಂದ ಬೃಹತ್ ಗಾತ್ರದ ಕಲ್ಪಾಜಿ ಮರವನ್ನು ಕಡಿಯುತ್ತಿರುವ ಬಗ್ಗೆ ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿ ಮಧುಸೂದನ್ ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಅರಣ್ಯ ಸಿಬ್ಬಂದಿಗಳು ದಾಳಿ ನಡೆಸಿ ಮರದ ದಿಮ್ಮಿ ಸಮೇತ 3 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ಪದ್ಮುಂಜ ನಿವಾಸಿಗಳಾದ ದಿನೇಶ್, ಉಮೆಶ್ ಗೌಡ, ಹೇಮಂತ್ ಎಂಬವರು ಬಂಧಿತ ಆರೋಪಿಗಳು. ಇವರು ಮರವನ್ನು ಯಂತ್ರದ ಮೂಲಕ ಉರುಳಿಸಿ, ಬಳಿಕ ಕಾಡಿನ ಒಳಗಡೆಯೇ ಅವುಗಳನ್ನು ದಿಮ್ಮಿಗಳನ್ನಾಗಿ ಮಾಡಿ ಸಾಗಾಟ ಮಾಡಲು ತಯಾರಿ ನಡೆಸಿಕೊಂಡಿದ್ದರು. ದಾಳಿ ನಡೆಸಿದ ಅರಣ್ಯ ಅಧಿಕಾರಿಗಳು ಯಂತ್ರಗಳ ಸಹಿತ ಮರಗಳ ದಿಮ್ಮಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
Kshetra Samachara
26/08/2022 06:22 pm