ಮಂಗಳೂರು: ಬೆಂಗಳೂರಿನ ಕೆಎಂಎಫ್ ಸಂಸ್ಥೆಯಲ್ಲಿ ಉದ್ಯೋಗ ದೊರಕಿಸಿಕೊಡುವುದಾಗಿ ನಂಬಿಸಿ 138 ಮಂದಿಗೆ 1.84 ಕೋಟಿ ರೂ. ದೋಖಾ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ರಾಮಪ್ರಸಾದ್ ರಾವ್ ಪಿ.(37) ಎಂಬಾತನನ್ನು ಬಂಧಿಸಲಾಗಿದೆ. ಈ ವಂಚನಾ ಜಾಲ ಇನ್ನೂ ದೊಡ್ಡದಿದ್ದು, ಅವರೆಲ್ಲರನ್ನೂ ಶೀಘ್ರದಲ್ಲೇ ಬಂಧಿಸಲಾಗುತ್ತದೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಎನ್. ತಿಳಿಸಿದ್ದಾರೆ.
ಆರೋಪಿಗಳು ಕೆಎಂಎಫ್‌ನಲ್ಲಿ ನೇರ ನೇಮಕಾತಿಯ ಮೂಲಕ ವಿವಿಧ ಉದ್ಯೋಗಗಳನ್ನು ದೊರಕಿಸಿಕೊಡುವುದಾಗಿ ನಂಬಿಸಿ ಒಬ್ಬೊಬ್ಬ ಸಂತ್ರಸ್ತರಿಂದಲೂ ಲಕ್ಷಾಂತರ ರೂ. ಹಣ ಪಡೆದುಕೊಂಡಿದ್ದಾರೆ. ವಂಚನೆಯ ಬಗ್ಗೆ ಸಂತ್ರಸ್ತರಿಂದ ದೂರು ಬಂದಿರುವ ಹಿನ್ನೆಲೆಯಲ್ಲಿ ಮಂಗಳೂರು ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಎಫ್ಐಆರ್‌ನಲ್ಲಿ ರಾಮಪ್ರಸಾದ್ ರಾವ್ ಪಿ. ಅಲ್ಲದೆ ಮೂಡಿಗೆರೆಯ ಹೇಮಂತ್, ಬೆಂಗಳೂರಿನ ಸುರೇಂದ್ರ ರೆಡ್ಡಿ, ದರ್ಶನ್ ಹಾಗೂ ಹಲವರನ್ನು ಆರೋಪಿಗಳೆಂದು ಗುರುತಿಸಲಾಗಿದೆ. ರಾಮಪ್ರಸಾದ್ ಓರ್ವ ಖಾಕಿ ಬಲೆಗೆ ಬಿದ್ದಿದ್ದು, ಉಳಿದ ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ. ಶೀಘ್ರದಲ್ಲೇ ಅವರನ್ನು ಬಂಧಿಸಲಾಗುತ್ತದೆ ಎಂದು ಪೊಲೀಸ್ ಕಮಿಷನರ್ ಹೇಳಿದರು.
Kshetra Samachara
20/08/2022 05:36 pm