ಮಂಗಳೂರು: ಕೆಎಂಎಫ್‌ನಲ್ಲಿ ಉದ್ಯೋಗದ ಭರವಸೆ ನೀಡಿ ನೂರಾರು ಮಂದಿಗೆ ಕೋಟ್ಯಂತರ ರೂ. ಪಂಗನಾಮ ಹಾಕಿರುವ ಪ್ರಮುಖ ಆರೋಪಿ ಪೊಲೀಸ್ ಬಲೆಗೆ ಬಿದ್ದಿದ್ದಾನೆ.
ಬಂಟ್ವಾಳ ತಾಲೂಕಿನ ಸಾಲೆತ್ತೂರು ನಿವಾಸಿ ರಾಮಪ್ರಸಾದ್ ರಾವ್ ಪಿ. (37) ಬಂಧಿತ ಆರೋಪಿ. ಕೆಎಂಎಫ್‌ನಲ್ಲಿ ನೇರ ನೇಮಕಾತಿ ಮೂಲಕ ಉದ್ಯೋಗ ಗಿಟ್ಟಿಸಿಕೊಳ್ಳಲು ಗುಟ್ಟಾಗಿ ಹಣ ನೀಡಿದ್ದಲ್ಲಿ ಉದ್ಯೋಗ ದೊರೆಯುತ್ತದೆ ಎಂದು ಆರೋಪಿ ಅಭ್ಯರ್ಥಿಗಳಿಗೆ ಆಸೆ ಹುಟ್ಟಿಸಿದ್ದ. ಈ ಹಿನ್ನೆಲೆಯಲ್ಲಿ 138ಕ್ಕೂ ಅಧಿಕ ಮಂದಿ ಉದ್ಯೋಗಾರ್ಥಿಗಳನ್ನು ನಂಬಿಸಿ ಸುಮಾರು 1.84 ಕೋಟಿ ರೂ. ಹಣ ಪಡೆದುಕೊಂಡು ಕೆಎಂಎಫ್ ಡೈರಿ ಸರಕಾರಿ ಸಂಸ್ಥೆಯ ನಕಲಿ ಉದ್ಯೋಗ ನೇಮಕಾತಿ ಪತ್ರ, ಕೆಎಂಎಫ್ ಐಡಿ ಕಾರ್ಡ್ ನೀಡಿ ವಂಚನೆಗೈದಿದ್ದಾರೆ ಎಂದು ದೂರು ಬಂದಿತ್ತು.
ಇದೀಗ ರಾಮಪ್ರಸಾದ್ ರಾವ್‌ನನ್ನು ಬಂಧಿಸಿರುವ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಈತ ರಾಮಪ್ರಸಾದ್ ರಾವ್ ಅಲ್ಲದೆ ಹರೀಶ್, ಕೇಶವ, ಶಶಿಧರ್ ಎಂಬ ಹೆಸರಿನಲ್ಲೂ ಹಲವರನ್ನು ವಂಚಿಸಿದ್ದ ಎಂದು ತಿಳಿದು ಬಂದಿದೆ. ಇನ್ನೂ ಕೆಲವರು ಈ ಪ್ರಕರಣದಲ್ಲಿದ್ದು, ಶೀಘ್ರದಲ್ಲೇ ಪೊಲೀಸರು ಬಂಧಿಸಲಿದ್ದಾರೆ.
PublicNext
19/08/2022 02:00 pm