ಕುಂದಾಪುರ: ಕೊರ್ಗಿ ಗ್ರಾಮದ ಕೊರ್ಗಿ ಕ್ರಾಸ್ ಸಮೀಪ ಶಾಲಾ ಬಸ್ಸಿಗಾಗಿ ಕಾಯುತ್ತಾ ನಿಂತಿದ್ದ ಮಹಿಳೆಯೊಬ್ಬರಿಗೆ ಹಲ್ಲೆ ನಡೆಸಿ ಆಕೆ ಧರಿಸಿದ್ದ 1,60 ಮೌಲ್ಯದ ಚಿನ್ನಾಭರಣ ಸುಲಿಗೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬೈಂದೂರಿನ ತ್ರಾಸಿಯ ಹೊಸಾಡು ಗ್ರಾಮದ ಪ್ರವೀಣ್ (24) ಬಂಧಿತ ಆರೋಪಿ. ಬಂಧಿತನಿಂದ ಆತ ಸುಲಿಗೆ ಮಾಡಿರುವ ಚಿನ್ನದ ಉಂಗುರ ಮತ್ತು ಗುಜ್ಜಾಡಿ ಸೊಸೈಟಿಯಲ್ಲಿ ಚಿನ್ನದ ಕರಿಮಣಿ ಸರ ಅಡವಿರಿಸಿ ಪಡೆದುಕೊಂಡಿರುವ ನಗದು 41,000 ರೂ. ವನ್ನು ಪೊಲೀಸರು ವಶಪಡಿಸಿ ಕೊಂಡಿದ್ದಾರೆ.
ಆರೋಪಿಯ ಪತ್ತೆ ಕಾರ್ಯಾಚರಣೆಯಲ್ಲಿ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಎನ್. ವಿಷ್ಣುವರ್ಧನ ಅವರ ನಿರ್ದೇಶನದಲ್ಲಿ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಸ್.ಟಿ. ಸಿದ್ದಲಿಂಗಪ್ಪರವರ ಮಾರ್ಗದರ್ಶನದಲ್ಲಿ ಕುಂದಾಪುರ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಶ್ರೀಕಾಂತ್.ಕೆ, ಕುಂದಾಪುರ ವೃತ್ತ ನಿರೀಕ್ಷಕರಾದ ಗೋಪಿಕೃಷ್ಣ ಕೆ.ಆರ್.ರವರ ನೇತೃತ್ವದಲ್ಲಿ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣಾ ಪೊಲೀಸ್ ಉಪ ನಿರೀಕ್ಷಕರಾದ ನಿರಂಜನ್ ಗೌಡ ಬಿ.ಎಸ್. ಹಾಗೂ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಪಿಎಸ್‌ಐ ನಿರಂಜನ್ ಗೌಡ ಬಿ.ಎಸ್. ಕುಂದಾಪುರ ಗ್ರಾಮಾಂತರ ಠಾಣೆಯ ಸಿಬ್ಬಂದಿಯವರಾದ ರಾಜು.ಬಿ, ಅನಿಲ್ ಕುಮಾರ್, ಚಿದಾನಂದ, ಜೀಪು ಚಾಲಕ ಆನಂದ, ಕುಂದಾಪುರ ಉಪವಿಭಾಗ ಅಪರಾಧ ಪತ್ತೆ ದಳದ ರಾಮು ಹೆಗಡೆ, ರಾಘವೇಂದ್ರ ಉಪ್ಪುಂದ ಮತ್ತು ತಾಂತ್ರಿಕ ವಿಭಾಗದ ಸಿಬ್ಬಂದಿಯವರಾದ ದಿನೇಶ್ ಭಾಗವಹಿಸಿದ್ದರು. ಪೊಲೀಸರ ಈ ವಿಶೇಷ ತಂಡದ ಯಶಸ್ವಿ ಕಾರ್ಯಕ್ಕೆ ಪೊಲೀಸ್ ಅಧೀಕ್ಷಕರು ಅಭಿನಂದಿಸಿದ್ದಾರೆ.
ಆ.5 ರಂದು ಸಂಜೆ ವೇಳೆ ಕುಂದಾಪುರದ ಕೊರ್ಗಿ ಗ್ರಾಮದ ಕೊರ್ಗಿ ಕ್ರಾಸ್ ಸಮೀಪ ಕಾಡಿನ ಬೆಟ್ಟು ಕಡೆಗೆ ಹೋಗುವ ರಸ್ತೆಯ ಬಳಿಯಲ್ಲಿ ಶಾಲಾ ಬಸ್ಸಿನಲ್ಲಿ ಬರುವ ತನ್ನ ಮಗನನ್ನು ಕರೆದುಕೊಂಡು ಹೋಗಲು ರಸ್ತೆಯ ಬದಿಯಲ್ಲಿ ನಿಂತಿದ್ದ ಕಾಡಿನ ಬೆಟ್ಟು ನಿವಾಸಿ ದೇವಕಿ ಪೂಜಾರ್ತಿ ಎಂಬಾಕೆಯ ಮೇಲೆ ಹಿಂದಿನಿಂದ ಬಂದ ಅಪರಿಚಿತ ವ್ಯಕ್ತಿಯು ತಲೆಗೆ ಕಬ್ಬಿಣದ ರಾಡ್‌ನಿಂದ ಹೊಡೆದು ಗಂಭೀರವಾಗಿ ಹಲ್ಲೆ ಮಾಡಿ ಅವರ ಕುತ್ತಿಗೆಯಲ್ಲಿದ್ದ 1,60,000 ರೂ ಮೌಲ್ಯದ ಚಿನ್ನದ ಕರಿಮಣಿ ಸರ, ಕೈಯಲ್ಲಿದ್ದ ಬಳೆ ಮತ್ತು ಉಂಗುರವನ್ನು ಸುಲಿಗೆ ಮಾಡಿ ಪರಾರಿಯಾಗಿದ್ದ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
Kshetra Samachara
11/08/2022 08:37 pm