ಬೆಳ್ತಂಗಡಿ: ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಲಾಗಿದೆ ಎಂಬ ಆರೋಪದಲ್ಲಿ ಯುವಕರ ತಂಡವೊಂದು ವ್ಯಕ್ತಿಯೊಬ್ಬರು ಹಲ್ಲೆ ನಡೆಸಿದ್ದು, ಈ ವೇಳೆ ಗಲಾಟೆಯನ್ನು ತಡೆಯಲು ಬಂದ ವ್ಯಕ್ತಿಗೂ ಹಲ್ಲೆ ನಡೆಸಲಾಗಿದೆ. ಪರಿಣಾಮ ಗಂಭೀರವಾಗಿ ಗಾಯಗೊಂಡ ಅವರು ಆಸ್ಪತ್ರೆಗೆ ದಾಖಲಿಸುವ ವೇಳೆ ಮೃತಪಟ್ಟ ಘಟನೆ ಶುಕ್ರವಾರ ರಾತ್ರಿ ನಡೆದಿದೆ.
ಬೆಳ್ತಂಗಡಿ ತಾಲೂಕಿನ ಪರಾರಿ ಶಾಂತಿನಗರದ ನಿವಾಸಿ ಜಾರಪ್ಪ ನಾಯ್ಕ ( 55 ) ಮೃತಪಟ್ಟ ವ್ಯಕ್ತಿ. ನಾರಾಯಣ ನಾಯ್ಕ (47) ಎಂಬಾತ ಸ್ಥಳೀಯ ಆರು ವರ್ಷದ ಅಪ್ರಾಪ್ತ ಬಾಲಕಿಗೆ ಕಳೆದ 10 ದಿನಗಳ ಹಿಂದೆ ಲೈಂಗಿಕ ಕಿರುಕುಳ ನೀಡಿದ್ದ ಎಂದು ಹೇಳಲಾಗುತ್ತಿದೆ.
ಈ ಲೈಂಗಿಕ ಕಿರುಕುಳ ವಿಚಾರವಾಗಿ ಅದಾಗಲೆ ರಾಜಿ ಸಂಧಾನವೂ ನಡೆದಿತ್ತು. ಆದರೆ ನಿನ್ನೆ ಸಂಜೆ ವೇಳೆ ಆತ ಮತ್ತೆ ಬಾಲಕಿಯನ್ನು ಕರೆದು ಮಾತಾಡಿಸಿದ್ದ ಎಂದು ಆರೋಪಿಸಲಾಗಿದೆ. ಪರಿಣಾಮ ಇದರ ಬಗ್ಗೆ ತಗಾದೆ ತೆಗೆದ ಯುವಕರ ತಂಡ ನಾರಾಯಣ ನಾಯ್ಕನನ್ನು ತಡೆದು ಹಲ್ಲೆಗೆ ಮುಂದಾಗಿದೆ. ಇದನ್ನು ನೋಡಿ ಜಾರಪ್ಪ ನಾಯ್ಕ ಎಂಬವರು ಹಲ್ಲೆ ನಡೆಸುವುದನ್ನು ತಡೆಯಲು ಬಂದಿದ್ದಾರೆ. ಆದ್ದರಿಂದ ಅವರ ಮೇಲೂ ಯುವಕರ ತಂಡ ಹಲ್ಲೆ ಮಾಡಿದೆ.
ಪರಿಣಾಮ ಗಂಭೀರ ಗಾಯಗೊಂಡ ಅವರನ್ನು ಉಜಿರೆಯ ಖಾಸಗಿ ಆಸ್ಪತ್ರೆಗೆ ಕರೆತಂದಿದ್ದಾರೆ. ಈ ವೇಳೆ ಜಾರಪ್ಪ ನಾಯ್ಕ ಅವರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಇದೀಗ ಮೃತದೇಹವನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಸಾಗಿಸಿದ್ದು, ನಾರಾಯಣ ನಾಯ್ಕ ಅವರನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಈ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ಜಾರಪ್ಪ ನಾಯ್ಕ ಅವರ ಪುತ್ರ ರಾಜಶೇಖರ್ ದೂರು ನೀಡಿದ್ದು, ಪ್ರಕರಣದ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Kshetra Samachara
23/07/2022 10:08 am