ಮಂಗಳೂರು: ನಗರದಲ್ಲಿ ಸಾರ್ವಜನಿಕರಿಗೆ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಗಾಂಜಾ ಮಾರಾಟ ಮಾಡಲು ಯತ್ನಿಸಿರುವ ಹಾಗೂ ಗಾಂಜಾ ಸೇವನೆ ಮಾಡಿರುವ ಆರೋಪದಲ್ಲಿ ಕುಖ್ಯಾತ ಆರೋಪಿ ಪತಿ ಹಾಗೂ ಆತನ ಪತ್ನಿಯನ್ನು ಮಂಗಳೂರು ಸಿಸಿಬಿ ಪೊಲೀಸರು ದಸ್ತಗಿರಿ ಮಾಡಿ, 2.200 ಕೆಜಿ ಗಾಂಜಾ ವಶಕ್ಕೆ ತೆಗೆದುಕೊಂಡಿದ್ದಾರೆ.
ಕಾವೂರಿನ ಶಂಕರ ನಗರ ಕೆ.ಸಿ.ಆಳ್ವ ಲೇಔಟ್ ನಿವಾಸಿ ವಿಖ್ಯಾತ್ ಅಲಿಯಾಸ್ ವಿಕ್ಕಿ ಬಪ್ಪಾಲ್(28) ಹಾಗೂ ಆತನ ಪತ್ನಿ ಅಂಜನಾ(21) ಬಂಧಿತ ಆರೋಪಿಗಳು. ಅರೋಪಿಗಳು ಗಾಂಜಾ ಮಾರಾಟಕ್ಕೆ ಯತ್ನ ಹಾಗೂ ಸೇವನೆ ಮಾಡಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ಮಂಗಳೂರಿನ ನಗರದ ಕಾವೂರಿನ ಶಂಕರ ನಗರ ಕೆ.ಸಿ.ಆಳ್ವ ಲೇಔಟ್ ನ ಮನೆಯೊಂದಕ್ಕೆ ದಾಳಿ ಮಾಡಿ ಗಾಂಜಾ ಸಹಿತ ಆರೋಪಿಗಳನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತ ಆರೋಪಿಗಳಿಂದ 2.200 ಕೆಜಿ ತೂಕದ 22,000 ರೂ. ಮೌಲ್ಯದ ಗಾಂಜಾ, 1,500 ನಗದು, 1 ಮೊಬೈಲ್ ಫೋನ್ ಮತ್ತು ಡಿಜಿಟಲ್ ತೂಕ ಮಾಪನ ಸೇರಿದಂತೆ ಒಟ್ಟು 92,000 ರೂ. ಮೌಲ್ಯದ ಸೊತ್ತು ವಶಪಡಿಸಿಕೊಳ್ಳಲಾಗಿದೆ. ಈ ಗಾಂಜಾ ಮಾರಾಟ ಜಾಲದಲ್ಲಿ ಇನ್ನೂ ಹಲವು ಆರೋಪಿಗಳು ಭಾಗಿಯಾಗಿರುವ ಬಗ್ಗೆ ತಿಳಿದು ಬಂದಿದ್ದು, ಅವರನ್ನು ಶೀಘ್ರವಾಗಿ ಪೊಲೀಸರು ಬಂಧಿಸಲಿದ್ದಾರೆ. ಈ ಪತಿ - ಪತ್ನಿಯರಿಬ್ಬರೂ ಮಂಗಳೂರು ನಗರದ ಎಂ ಜಿ ರಸ್ತೆಯಲ್ಲಿರುವ ವಿದ್ಯಾಸಂಸ್ಥೆಗಳ ಪರಿಸರದಲ್ಲಿ, ಕೆಪಿಟಿ, ಕದ್ರಿ, ಜೆಪ್ಪು ಬಪ್ಪಾಲ್ ಪರಿಸರದಲ್ಲಿ ಗಾಂಜಾವನ್ನು ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದರು. ಆರೋಪಿಗಳ ವಿರುದ್ಧ ಸೆನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
PublicNext
17/07/2022 10:44 am