ಬೈಂದೂರು: ತಾಲೂಕಿನ ಒತ್ತಿನೆಣೆ ಸಮೀಪದ ಕಾಡಿನಲ್ಲಿ ಕಾರು ಹಾಗೂ ಅದರೊಳಗಿದ್ದ ವ್ಯಕ್ತಿ ಸುಟ್ಟು ಕರಕಲಾದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಒಂದೇ ದಿನದಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ.
ಕಾರ್ಕಳ ಮೂಲದ ಆನಂದ ದೇವಾಡಿಗ (62) ಕೊಲೆಯಾದವರು. ಕಾರ್ಕಳದ ಮಾಳ ನಿವಾಸಿ ಸದಾನಂದ ಶೇರಿಗಾರ್ (52), ಹಿರ್ಗಾನ ಶಿವನಗರದ ಶಿಲ್ಪಾ ಸಾಲ್ಯಾನ್ (30) ಕೊಲೆ ಮಾಡಿ ಸುಟ್ಟವರು. ಕಾರ್ಕಳ ಪಚ್ಚಲಾಡಿ ಸೂಡ ನಿವಾಸಿಗಳಾದ ಸತೀಶ್ ದೇವಾಡಿಗ (49), ನಿತಿನ್ ದೇವಾಡಿಗ (40) ಕೊಲೆ ಆರೋಪಿಗಳಿಬ್ಬರು ಪರಾರಿಯಾಗಲು ಸಹಕರಿಸಿದ್ದು ಸದ್ಯ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
ಮಾಸ್ಟರ್ ಪ್ಲಾನ್!; ಹಳೆ ಕೇಸೊಂದರಲ್ಲಿ ತನಗೆ ಶಿಕ್ಷೆಯಾಗುವ ಭಯದಲ್ಲಿದ್ದ ಸದಾನಂದ ಆತ್ಮಹತ್ಯೆ ಮಾಡಿಕೊಂಡಂತೆ ಬಿಂಬಿಸಿ ದಾಖಲೆಗಳನ್ನು ನೀಡಿ ಆ ಕೇಸಿನಿಂದ ಬಚಾವ್ ಆಗುವ ಮಾಸ್ಟರ್ ಪ್ಲಾನ್ ರೂಪಿಸಿದ್ದ. ಅದಕ್ಕಾಗಿ ಆನಂದ ದೇವಾಡಿಗರಿಗೆ ಮದ್ಯದಲ್ಲಿ ನಿದ್ರೆ ಮಾತ್ರೆ ಬೆರೆಸಿ ಪ್ರಜ್ಞೆ ತಪ್ಪಿಸಿ ಕಾರಿನಲ್ಲಿ ಕರೆತಂದು 5 ಲೀಟರಿಗೂ ಅಧಿಕ ಪೆಟ್ರೋಲ್ ಕಾರಿಗೆ ಸುರಿದು, ಕಾರು ಮತ್ತು ಮೃತದೇಹ ಸುಟ್ಟುಹಾಕಿದ್ದ!
ಆರೋಪಿ ಸದಾನಂದ ಮೊದಲು ಖಾಸಗಿ ಸರ್ವೇಯರ್ ಆಗಿದ್ದ. ಸದ್ಯ ಕಲ್ಲುಕ್ವಾರಿ ನಡೆಸುತ್ತಿದ್ದಾನೆ. ಈತ ವಿವಾಹಿತನಾಗಿದ್ದು ಇಬ್ಬರು ಮಕ್ಕಳಿದ್ದಾರೆ. ಇನ್ನೋರ್ವ ಆರೋಪಿ ಶಿಲ್ಪಾ ಕೂಡ ವಿವಾಹಿತೆ. ಕೃತ್ಯದ ಬಳಿಕ ಪರಾರಿಯಾಗಲು ಸಹಕರಿಸಿದ ಸತೀಶ್ ಟೈಲರಿಂಗ್ ವೃತ್ತಿ ಮಾಡುತ್ತಿದ್ದು, ನಿತೀಶ್ ಫೋಟೊಗ್ರಾಫರ್ ಆಗಿದ್ದಾನೆ.
PublicNext
14/07/2022 10:25 pm