ಉಳ್ಳಾಲ: ಕಳೆದ ಮಂಗಳವಾರ ಹಣಕಾಸಿನ ವಿಚಾರಕ್ಕೆ ಸಂಬಂಧಿಸಿ ಉಚ್ಚಿಲ ಸಮೀಪ ನಸುಕಿನ ಜಾವ ನಡೆದಿರುವ ರೌಡಿಶೀಟರ್ ಅಜ್ಜಿನಡ್ಕ, ಮುಳ್ಳುಗುಡ್ಡೆ ನಿವಾಸಿ ಆರೀಫ್ (37)ಕೊಲೆಯತ್ನ ಪ್ರಕರಣದ ಐವರು ಆರೋಪಿಗಳನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ. ಉಳ್ಳಾಲ ಮೇಲಂಗಡಿ ನಿವಾಸಿ ಅಬ್ದುಲ್ ಕರೀಂ(46) ಪೈಝಲ್‌ನಗರ ನಿವಾಸಿಗಳಾದ ಪುಚ್ಚ ನಿಶಾಕ್(25) ಮೊಹಮ್ಮದ್ ಅಶ್ಪಾಕ್(26) ಕಾಟಿಪಳ್ಳ ನಿವಾಸಿ ಉಮ್ಮರ್ ಫಾರೂಕ್(25)ಮಾರ್ನಮಿಕಟ್ಟೆ ನಿವಾಸಿ ರಿಫಾತ್ (27)ಬಂಧಿತ ಆರೋಪಿಗಳು.
ರೌಡಿಶೀಟರ್ ಆರೀಫ್ ಮತ್ತು ಅಬ್ದುಲ್ ಕರೀಂ ಜತೆಯಾಗಿ ವ್ಯವಹಾರ ಮಾಡುತ್ತಿದ್ದು,ಕರೀಂ ಎಂಬಾತ ಆರೀಫ್ ನಿಂದ ಸಾಲ ಪಡೆದು ಕೊಂಡಿದ್ದ ಎನ್ನಲಾಗಿದೆ. ಕೆಲವು ದಿನಗಳ ಹಿಂದೆ ಆರೀಫ್ ಸಾಲ ನೀಡಿದ ಹಣ ವಾಪಾಸ್ ನೀಡುವಂತೆ ಕರೀಂನಲ್ಲಿ ಕೇಳಿದ್ದ. ಈ ವಿಚಾರವನ್ನು ಕರೀಂ ನೌಫಾಲ್ ಬಳಿ ತಿಳಿಸಿದ್ದ ಎನ್ನಲಾಗಿದೆ. ನೌಫಾಲ್ ಆರೀಫ್‌ಗೆ ಕರೆ ಮಾಡಿ ಎಲ್ಲಾ ಹಣ ವಾಪಾಸ್ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿದ್ದ. ಇದೇ ವಿಚಾರದಲ್ಲಿ ಅವರ ಮಧ್ಯೆ ಸಂಘರ್ಷ ನಡೆದಿದ್ದು,ನೌಫಾಲ್ ತನ್ನ ಸ್ನೇಹಿತರಾದ ನಿಶಾಕ್, ಅಶ್ಪಾಕ್, ಫಾರೂಕ್ ಮತ್ತು ರಿಫಾತ್ ಗೆ ಕೊಲೆ ಮಾಡಲು ಸುಫಾರಿ ನೀಡಿದ್ದ ಎಂಬುದು ತನಿಖೆಯ ವೇಳೆ ತಿಳಿದು ಬಂದಿದೆ.
ಮಂಗಳವಾರ ನಸುಕಿನ ಜಾವ ಆರೋಪಿಗಳು ಆರೀಫ್ ನನ್ನು ಉಚ್ಚಿಲ ಬಳಿ ತಡೆದು ನಿಲ್ಲಿಸಿ ಮಚ್ಚಿನಿಂದ ದಾಳಿ ನಡೆಸಿ ಕೊಲೆಯತ್ನ ನಡೆಸಿದ್ದರು.ಗಂಭೀರ ಗಾಯಗೊಂಡ ಆರೀಫ್ ಆರೋಪಿಗಳ ಕೈಯಿಂದ ತಪ್ಪಿಸಿಕೊಂಡಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು.ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ. ತಲೆಮರೆಸಿಕೊಂಡಿರುವ ಆರೋಪಿಗಳಾದ ನೌಫಾಲ್, ತಲ್‌ಹತ್ ಬಂಧನಕ್ಕೆ ಶೋಧ ಮುಂದುವರಿದಿದೆ.
Kshetra Samachara
27/05/2022 10:48 pm