ಮಂಗಳೂರು: ನಗರದ ಬಜ್ಪೆಯಲ್ಲಿರುವ ಎಸ್ಇಝಡ್‌ನಲ್ಲಿ ಕಾರ್ಯಾಚರಿಸುತ್ತಿರುವ ಶ್ರೀ ಉಲ್ಕಾ ಫಿಶ್ ಮಿಲ್‌ನಲ್ಲಿ ತಿಂಗಳ ಹಿಂದೆ ನಡೆದಿರುವ ದುರಂತದಲ್ಲಿ ಸಾವಿಗೀಡಾದ ಪಶ್ಚಿಮ ಬಂಗಾಳದ 24 ಪರಗಣ ಜಿಲ್ಲೆಯ ದೇಗಂಗಾ ಗ್ರಾಮದ ವಲಸೆ ಕಾರ್ಮಿಕರ ಮನೆಗಳಿಗೆ ಡಿವೈಎಫ್ಐ ಕರ್ನಾಟಕ ರಾಜ್ಯ ಸಮಿತಿ ನಿಯೋಗ ಭೇಟಿ ನೀಡಿ ಸಾಂತ್ವನ ಹೇಳಿತು.
ಈ ಸಂದರ್ಭ ದುರಂತದಲ್ಲಿ ಮೃತಪಟ್ಟವರ ಕುಟುಂಬಸ್ಥರಿಗೆ ಪರಿಹಾರ ಮೊತ್ತ ಒದಗಿಸುವ ಕೆಲಸದ ಪ್ರಗತಿಯನ್ನು ಪರಿಶೀಲಿಸಿತು. ವಲಸೆ ಕಾರ್ಮಿಕರ ಸಂಘಟನೆಯ ಪ್ರಮುಖರೊಂದಿಗೆ ಚರ್ಚೆ ನಡೆಸಲಾಯಿತು. ಆತ್ಮೀಯವಾಗಿ ಬರಮಾಡಿಕೊಂಡ ಇಲ್ಲಿನ ಗ್ರಾಮಸ್ಥರು ದುರಂತದ ಸಂದರ್ಭ ಜೊತೆಯಾಗಿ ನಿಂತು ಸಹಾಯ ಒದಗಿಸಿ ತಲಾ 15 ಲಕ್ಷ ರೂ. ಪರಿಹಾರ ಒದಗಿಸಲು ಶ್ರಮಿಸಿರುವ ಮಂಗಳೂರಿನ ಡಿವೈಎಫ್ಐಗೆ ಕೃತಜ್ಞತೆ ಅರ್ಪಿಸಿದರು. ಈ ಸಂದರ್ಭ ಸ್ಥಳೀಯ ಡಿವೈಎಫ್ಐ, ಸಿಪಿಐಎಂ ಮುಖಂಡರು ಜೊತೆಗಿದ್ದರು.
ಮೃತರ ಕುಟುಂಬದವರಿಗೆ ಕಂಪೆನಿಯ ಪರಿಹಾರ ಧನ ಒದಗಿಸುವ ಕೆಲಸ ಪ್ರಗತಿಯಲ್ಲಿದೆ. ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ಕೆ.ವಿ. ರಾಜೇಂದ್ರ ಸಂತ್ರಸ್ತ ಕುಟುಂಬದ ಗುರುತು ದೃಢೀಕರಣಕ್ಕಾಗಿ 24 ಪರಗಣ ಜಿಲ್ಲಾಧಿಕಾರಿಗಳಿಗೆ ಕಳುಹಿಸಿರುವ ಪಟ್ಟಿಯ ಪರಿಶೀಲನೆ ನಡೆಯುತ್ತಿದ್ದು, ಇದು ಬಹುತೇಕ ಪೂರ್ಣಗೊಂಡಿದೆ. ದೃಢೀಕರಣಗೊಂಡ ಪಟ್ಟಿ ಮಂಗಳೂರು ಜಿಲ್ಲಾಧಿಕಾರಿ ಕಚೇರಿ ತಲುಪಿದ ತಕ್ಷಣ ಕಂಪನಿ ಕುಟುಂಬಗಳ ಖಾತೆಗೆ ನಗದು ವರ್ಗಾಯಿಸಲಿದೆ ಎಂದು ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಹೇಳಿದರು.
Kshetra Samachara
16/05/2022 09:52 pm