ಮಂಗಳೂರು ಹೊರವಲಯದ ಎಸ್ಇಝೆಡ್ ವ್ಯಾಪ್ತಿಯ ಮೀನಿನ ಫ್ಯಾಕ್ಟರಿಯಲ್ಲಿ ವಿಷಾನಿಲ ಸೋರಿಕೆಯಾಗಿ ಮೂವರು ಕಾರ್ಮಿಕರು ದಾರುಣವಾಗಿ ಮೃತಪಟ್ಟಿದ್ದಾರೆ.
ಟ್ಯಾಂಕ್ ಶುಚಿಗೊಳಿಸುತ್ತಿರುವಾಗ ವಿಷಾನಿಲ ಸೋರಿಕೆಯಾದ ಪರಿಣಾಮ ಈ ದುರಂತ ಸಂಭವಿಸಿದೆ. ಪಶ್ಚಿಮ ಬಂಗಾಳ ಮೂಲದ ಸಮಿರುಲ್ಲ ಇಸ್ಲಾಂ, ಉಮರ್ ಫಾರೂಕ್, ನಿಜಾಮುದ್ದೀನ್ ಸಾಜ್ ಮೃತಪಟ್ಟ ದುರ್ದೈವಿಗಳು. ಇನ್ನು ಘಟನೆಯಲ್ಲಿ ಮಿರಾಜುಲ್ಲ್ ಇಸ್ಲಾಂ, ಸರಾಫತ್ ಅಲಿ, ಅಜನ್ ಅಲಿ, ಕರೀಬುಲ್ಲ, ಅಫ್ತಲ್ ಮಲ್ಲಿಕ್ ಸೇರಿದಂತೆ ಹಲವರ ಸ್ಥಿತಿ ಚಿಂತಾಜನಕವಾಗಿದೆ.
ಭಾನುವಾರ ರಾತ್ರಿ ಕಾರ್ಮಿಕನೊಬ್ಬ ಮೀನಿನ ತ್ಯಾಜ್ಯದ ಟ್ಯಾಂಕನ್ನು ಶುಚಿಗೊಳಿಸಲು ಕೆಳಗಿಳಿದಿದ್ದಾನೆ. ಈ ವೇಳೆ ಏಕಾಏಕಿ ಅಸ್ವಸ್ಥಗೊಂಡು ಬಿದ್ದಿದ್ದಾನೆ. ಕೂಡಲೇ ಆತನನ್ನು ರಕ್ಷಿಸಲು 8 ಮಂದಿ ಕಾರ್ಮಿಕರು ಹೋಗಿದ್ದಾರೆ. ಎಲ್ಲರಿಗೂ ಉಸಿರಾಟದಲ್ಲಿ ಏರುಪೇರು ಉಂಟಾಗಿ ಅಸ್ವಸ್ಥಗೊಂಡಿದ್ದಾರೆ. ಅಸ್ವಸ್ಥಗೊಂಡವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಡಿಸಿಪಿ ಹರಿರಾಂ ಶಂಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
PublicNext
18/04/2022 08:24 am