ಮಂಗಳೂರು: ಅಪ್ರಾಪ್ತ ಕಾಲೇಜು ವಿದ್ಯಾರ್ಥಿನಿಯರನ್ನು ಇಟ್ಟುಕೊಂಡು ಹೈಟೆಕ್ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಪ್ರಕರಣದಲ್ಲಿ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ರಶೀದ್ ಸಾಹೇಬ್(73), ಮೊಹಮ್ಮದ್ ಆಲಿ(74), ಗ್ರೆಗರಿ ಲಿಯೋನಾರ್ಡ್ ಸಿಕ್ವೇರಾ(62), ಇಸ್ಮಾಯಿಲ್(41) ಬಂಧಿತ ಆರೋಪಿಗಳು. ಇತ್ತೀಚಿಗೆ ನಗರದ ನಂದಿಗುಡ್ಡದಲ್ಲಿನ ರಿಯಾನಾ ರೆಸಿಡೆನ್ಸಿ ಅಪಾರ್ಟ್‌ಮೆಂಟ್ ನ ಪೆಂಟ್ ಹೌಸ್ ನಲ್ಲಿ ಹೈಟೆಕ್ ವೇಶ್ಯಾವಾಟಿಕೆ ದಂಧೆಯೊಂದು ಬೆಳಕಿಗೆ ಬಂದಿತ್ತು. ಈ ಪ್ರಕರಣದಲ್ಲಿ ಈ ಹಿಂದೆಯೇ ಓರ್ವ ಅಪ್ರಾಪ್ತ ವಿದ್ಯಾರ್ಥಿನಿ ಸೇರಿದಂತೆ ನಾಲ್ವರು ಸಂತ್ರಸ್ತೆಯರನ್ನು ಪೊಲೀಸರು ರಕ್ಷಣೆ ಮಾಡಿದ್ದರು. ಅಲ್ಲದೆ ವೇಶ್ಯೆವಾಟಿಕೆ ನಡೆಸುತ್ತಿದ್ದ ಮಹಿಳೆ, ಆಕೆಯ ಪುತ್ರ, ಪಿಂಪ್ ಗಳು, ಗ್ರಾಹಕರು ಸೇರಿದಂತೆ ಒಟ್ಟು 10 ಮಂದಿ ಆರೋಪಿಗಳನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ.
ಪ್ರಕರಣದ ಬೆನ್ನು ಬಿದ್ದು ತನಿಖೆ ನಡೆಸಿದ್ದ ಮಂಗಳೂರು ಸಿಸಿಬಿ ಪೊಲೀಸರು ಮತ್ತೊಬ್ಬ ಅಪ್ರಾಪ್ತೆಗೆ ಆರೋಪಿಗಳು ಲೈಂಗಿಕ ಕಿರುಕುಳ ನೀಡಿರುವುದನ್ನು ಬಯಲಿಗೆಳೆದಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಗ್ರಾಹಕರ ರೀತಿಯಲ್ಲಿ ಬಂದು ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿದ್ದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಮತ್ತೆ ಪ್ರತ್ಯೇಕ ನಾಲ್ಕು ಪೋಕ್ಸೊ ಪ್ರಕರಣ ಸೇರಿದಂತೆ ಒಟ್ಟು ಐದು ಪ್ರಕರಣವನ್ನು ಮಂಗಳೂರು ಪೊಲೀಸರು ದಾಖಲಿಸಿಕೊಂಡಿದ್ದಾರೆ. ಇದೀಗ ಈ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 14ಕ್ಕೆ ಏರಿದೆ. ಇನ್ನಷ್ಟು ಜನರು ಈ ಕೃತ್ಯದ ಹಿಂದೆ ಇದ್ದು, ಅವರನ್ನೂ ಶೀಘ್ರ ಬಂಧಿಸಲಾಗುತ್ತದೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ತಿಳಿಸಿದ್ದಾರೆ.
Kshetra Samachara
08/03/2022 08:45 pm