ಬೆಳ್ತಂಗಡಿ: ತಾಲೂಕಿನ ಕನ್ಯಾಡಿ ನಿವಾಸಿ ದಲಿತ ಸಮುದಾಯದ ಕೂಲಿ ಕಾರ್ಮಿಕ ದಿನೇಶ್ ನಾಯ್ಕ್ ಎಂಬವರನ್ನು ಸ್ಥಳೀಯ ಬಿಜೆಪಿ ಮುಖಂಡ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಿದ್ದು, ಕೃತ್ಯ ನಡೆದು 2 ದಿನ ಕಳೆದರೂ ಪೊಲೀಸರು ಆರೋಪಿಯನ್ನು ಬಂಧಿಸಿಲ್ಲ.
ಆರೋಪಿಯು ಸ್ಥಳೀಯ ಶಾಸಕ ಹರೀಶ್ ಪೂಂಜ ಅವರ ಪರಮಾಪ್ತನಾಗಿದ್ದು, ಹೀಗಾಗಿ ಆತನನ್ನು ರಕ್ಷಿಸಲಾಗುತ್ತಿದೆ ಎಂದು ಮಾಜಿ ಶಾಸಕ, ಕಾಂಗ್ರೆಸ್ ಮುಖಂಡ ವಸಂತ ಬಂಗೇರ ಆರೋಪಿಸಿದ್ದಾರೆ. 24 ಗಂಟೆಯಲ್ಲಿ ಬಂಧಿಸದಿದ್ದರೆ ಬೃಹತ್ ಪ್ರತಿಭಟನೆ ಮಾಡುವುದಾಗಿಯೂ ಎಚ್ಚರಿಸಿದ್ದಾರೆ.
ಧರ್ಮಸ್ಥಳದ ಕನ್ಯಾಡಿ ನಿವಾಸಿ ಬಡ ಕೂಲಿ ಕಾರ್ಮಿಕ ದಿನೇಶ್ ನಾಯ್ಕ್ ರನ್ನು ಜಿಲ್ಲಾ ಬಜರಂಗದಳದ ನಾಯಕರೋರ್ವರ ಸಹೋದರ ಸ್ಥಳೀಯ ಬಿಜೆಪಿ ಮುಖಂಡ ಕೃಷ್ಣ ಎಂಬವರು ಥಳಿಸಿ ಗಂಭೀರ ಗಾಯಗೊಳಿಸಿದ್ದರು. ಅವರು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆಂದು ಆರೋಪಿಸಲಾಗಿದೆ.
ಇನ್ನೂ ಕೊಲೆ ಆರೋಪಿ ಬಂಧನವಾಗಿಲ್ಲ, ಶಾಸಕ ಹರೀಶ್ ಪೂಂಜ ರಕ್ಷಣೆ ಮಾಡುತ್ತಿದ್ದಾರೆ ಎಂದು ಮಾಜಿ ಶಾಸಕ ವಸಂತ ಬಂಗೇರ ಗಂಭೀರ ಆರೋಪ ಮಾಡಿದ್ದಾರೆ. ತಕ್ಷಣ ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್ ಕುಮಾರ್ ಕೊಲೆಯಾದ ದಿನೇಶ್ ನಾಯ್ಕ್ ಮನೆಗೆ ಭೇಟಿ ನೀಡಿ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಬೆಳ್ತಂಗಡಿಯ ಕನ್ಯಾಡಿ ನಿವಾಸಿ ದಿನೇಶ್ ನಾಯ್ಕ್ ಹತ್ಯೆಯಾದವರು. ವಿಹಿಂಪ, ಬಜರಂಗದಳ ಪುತ್ತೂರು ಜಿಲ್ಲಾ ಕಾರ್ಯಾಧ್ಯಕ್ಷ ಭಾಸ್ಕರ ಧರ್ಮಸ್ಥಳ ಅವರ ಸಹೋದರ ಕೃಷ್ಣ ಈ ಕೊಲೆ ಮಾಡಿದ್ದಾರೆ ಎಂದು ಮೃತ ದಿನೇಶ್ ನಾಯ್ಕ್ ತಾಯಿ ಪದ್ಮಾವತಿ ದೂರಿದ್ದಾರೆ . ಅದರಂತೆ ಕೃಷ್ಣ ನಾಯ್ಕ (ಶಂಕಿತ) ವಿರುದ್ದ ಐಪಿಸಿ ಸೆಕ್ಷನ್ 302ರಂತೆ ಕೊಲೆ ಪ್ರಕರಣ ದಾಖಲಾಗಿದೆ.
ಕೃಷ್ಣ ಅವರ ಜಾಗದ ದಾಖಲೆಗಳನ್ನು ಮಾಜಿ ಶಾಸಕ ವಸಂತ ಬಂಗೇರರ ಮೂಲಕ ತಾನು ಮಾಡಿಸಿಕೊಟ್ಟಿದ್ದು ಎಂದು ದಿನೇಶ್ ಸಾರ್ವಜನಿಕವಾಗಿ ಹೇಳಿದ್ದಾರೆ ಎನ್ನಲಾಗಿದೆ. ಇದರಿಂದ ಕೋಪಗೊಂಡ ಕೃಷ್ಣ ಅವರು ನನ್ನ ಪತಿಯ ಮೇಲೆ ಫೆ. 23 ರಂದು ಬೆಳಿಗ್ಗೆ ಹಲ್ಲೆ ನಡೆಸಿದ್ದಾರೆಂದು ದಿನೇಶ್ ಪತ್ನಿ ಕವಿತಾ ದೂರು ನೀಡಿದ್ದಾರೆ. ಧರ್ಮಸ್ಥಳ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.
Kshetra Samachara
26/02/2022 10:01 am