ಮಂಗಳೂರು: ಅಪ್ರಾಪ್ತ ಕಾಲೇಜು ವಿದ್ಯಾರ್ಥಿನಿ ಸಹಿತ ಯುವತಿಯರನ್ನು ಬಳಸಿಕೊಂಡು ಹೈಟೆಕ್ ವೇಶ್ಯೆವಾಟಿಕೆ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದ್ದು, ಇದೀಗ ಪೊಲೀಸರು ಮೂವರು ಗ್ರಾಹಕರು, ಮೂವರು ಪಿಂಪ್ ಗಳನ್ನು ಅರೆಸ್ಟ್ ಮಾಡಿದ್ದಾರೆ.
ನಗರದ ನಂದಿಗುಡ್ಡೆಯಲ್ಲಿರುವ ರಿಯಾನ್ ರೆಸಿಡೆನ್ಸಿ ಅಪಾರ್ಟ್‌ಮೆಂಟ್ ನಲ್ಲಿ ನಡೆಯುತ್ತಿದ್ದ ಈ ಹೈಟೆಕ್ ವೇಶ್ಯೆವಾಟಿಕೆ ಪ್ರಕರಣಕ್ಕೆ ಸಂಬಂಧಿಸಿ ಹಿಂದೆಯೇ ನಾಲ್ವರನ್ನು ಪೊಲೀಸರು ಬಂಧಿಸಿದ್ದರು. ಇದೀಗ ಪ್ರಕರಣದಲ್ಲಿ ಒಟ್ಟು ನಾಲ್ವರು ಮಹಿಳೆಯರ ಸಹಿತ 6 ಮಂದಿ ಪುರುಷರು ಬಂಧನಕ್ಕೊಳಗಾಗಿದ್ದಾರೆ. ಈ ಹಿಂದೆ ಅರೆಸ್ಟ್ ಆಗಿದ್ದ ನಾಲ್ವರು ಆರೋಪಿಗಳ ಮೇಲೆ ಪೋಕ್ಸೊ ಹಾಗೂ ಐಟಿಪಿ ಆ್ಯಕ್ಟ್ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ಇದೀಗ 4 ಹೆಚ್ಚುವರಿ ಪೋಕ್ಸೊ ಪ್ರಕರಣ ದಾಖಲಾಗಿದೆ. ಆರೋಪಿಗಳು ಕಾಲೇಜು ವಿದ್ಯಾರ್ಥಿನಿಯರು ಹಾಗೂ ಯುವತಿಯರ ಬಡತನ ದುರುಪಯೋಗಪಡಿಸಿ, ಆ ಬಳಿಕ ಆಮಿಷವೊಡ್ಡಿ ವೇಶ್ಯಾವಾಟಿಕೆಗೆ ಒತ್ತಡ ಹೇರುತ್ತಿದ್ದರು. ಇದಕ್ಕೆ ಒಪ್ಪದಿದ್ದಲ್ಲಿ ಸಂತ್ರಸ್ತೆಯರಿದ್ದ ಸಿಸಿ ಕ್ಯಾಮೆರಾ ದೃಶ್ಯಾವಳಿ ಇಟ್ಟು, ಬೆದರಿಕೆಯೊಡ್ಡಿ ಕೃತ್ಯದಲ್ಲಿ ಬಳಸುತ್ತಿದ್ದರು.
ಅಪ್ರಾಪ್ತ ವಿದ್ಯಾರ್ಥಿನಿ ಈ ದಂಧೆಯಲ್ಲಿ ಸಿಲುಕಿರುವ ವಿಚಾರ ಬಯಲಾದ ಬಳಿಕ ಪ್ರಕರಣ ಬಹಿರಂಗಗೊಂಡಿತ್ತು. ಆರೋಪಿಗಳು ಈ ವಿದ್ಯಾರ್ಥಿನಿಯನ್ನು 2-3 ತಿಂಗಳಿಂದ 6 ಬಾರಿ ವೇಶ್ಯೆವಾಟಿಕೆಗೆ ಬಳಸಿದ್ದಾರೆ. ಇನ್ನೂ ಮೂವರು ಯುವತಿಯರು ಈ ದಂಧೆಯಲ್ಲಿ ಸಿಲುಕಿದ್ದಾರೆ. ಇದೀಗ ಸಿಸಿಬಿ ಪೊಲೀಸರು ತನಿಖೆ ನಡೆಸುತ್ತಿದ್ದು, ಇನ್ನೂ ಕೆಲ ಮಂದಿ ಅರೆಸ್ಟ್ ಆಗುವ ಸಾಧ್ಯತೆಯಿದೆ.
Kshetra Samachara
09/02/2022 03:13 pm