ಉಡುಪಿ: ಒಎಲ್ ಎಕ್ಸ್ ನಲ್ಲಿ ಮಾರಾಟಕ್ಕಿಟ್ಟಿದ್ದ ಕಿವಿಯೋಲೆ ಖರೀದಿಸುವ ಭರವಸೆ ನೀಡಿದ ಅಪರಿಚಿತನ ಮಾತು ನಂಬಿದ ಯುವತಿಯೊಬ್ಬಳು ಬರೋಬ್ಬರಿ 93,818 ರೂ. ಕಳೆದುಕೊಂಡ ಘಟನೆ ಉಡುಪಿಯಲ್ಲಿ ನಡೆದಿದೆ.
ಹಣ ಕಳೆದುಕೊಂಡ ಮಣಿಪಾಲ ನಿವಾಸಿ ಖುಷಿ ಮೆಹ್ತಾ (19). ಜ.16ರಂದು ಅಪರಿಚಿತ ವ್ಯಕ್ತಿ ಕರೆ ಮಾಡಿ ಕಿವಿಯೋಲೆ ಖರೀದಿಸುವುದಾಗಿ ತಿಳಿಸಿ, ಹಣವನ್ನು ಪೇಟಿಎಂ ಮೂಲಕ ಪಾವತಿಸುವುದಾಗಿ ನಂಬಿಸಿ 5 ಹಾಗೂ 100 ರೂ. ಹಣವನ್ನು ಖುಷಿ ಖಾತೆಗೆ ಜಮಾ ಮಾಡಿದ್ದಾನೆ. ನಂತರ ಈಕೆಯ ಖಾತೆಯಿಂದ ಹಂತ ಹಂತವಾಗಿ ಒಟ್ಟು 19,018 ರೂ. ಹಣ ಕಡಿತಗೊಂಡಿದೆ. ಇದನ್ನು ಗಮನಿಸಿದ ಯುವತಿ ಅಪರಿಚಿತ ವ್ಯಕ್ತಿಗೆ ಖಾತೆಯಿಂದ ಹಣ ಕಡಿತಗೊಂಡ ಬಗ್ಗೆ ವಿಚಾರಿಸಿದ್ದು, ಹಣ ಮರುಪಾವತಿ ಮಾಡುವುದಾಗಿ ನಂಬಿಸಿ, ಬೇರೆ ಯಾವುದಾದರೂ ಖಾತೆ ವಿವರ ಒದಗಿಸುವಂತೆ ತಿಳಿಸಿದ್ದಾನೆ.
ಇದನ್ನು ನಂಬಿದ ಆಕೆ ಸ್ನೇಹಿತೆ ಟಿ.ಸಾಯಿ ಚಂದನ ಅವರ ಪೇಟಿಎಂ ಸಂಖ್ಯೆ ನೀಡಿದ್ದಾರೆ. ಬಳಿಕ ಅಪರಿಚಿತ ವ್ಯಕ್ತಿ ಮೊಬೈಲ್ ಗೆ ಬಂದಿರುವ ಒಟಿಪಿ ಪಡೆದು ಖಾತೆಯಿಂದ ಹಂತ ಹಂತವಾಗಿ ಒಟ್ಟು 74,800 ರೂ. ದೋಚಿದ್ದಾನೆ. ಈ ಬಗ್ಗೆ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
21/01/2022 12:52 pm