ಮಂಗಳೂರು: ಪತ್ನಿ ಮೃತಪಟ್ಟಿರುವಳೆಂದು ಸುಳ್ಳು ದಾಖಲೆಗಳನ್ನು ಸೃಷ್ಟಿಸಿ, ಎಲ್ಐಸಿ ಪಾಲಿಸಿ ಹಣವನ್ನು ಪಡೆದಿರುವ ವ್ಯಕ್ತಿಯ ಮೇಲಿನ ಆರೋಪ ಸಾಬೀತುಗೊಂಡ ಹಿನ್ನೆಲೆಯಲ್ಲಿ ವ್ಯಕ್ತಿಯೋರ್ವನಿಗೆ ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 3 ವರ್ಷ 6 ತಿಂಗಳು ಕಠಿಣ ಸಜೆ ಹಾಗೂ 10 ಸಾವಿರ ರೂ. ದಂಡ ವಿಧಿಸಿ ಆದೇಶಿಸಿದೆ.
ಆರೋಪಿ ಶಿವರಾಮ ಶೆಣೈ(50) ನಗರದ ಕೆಎಸ್ ರಾವ್ ರಸ್ತೆಯಲ್ಲಿರುವ ಎಲ್ಐಸಿ ಕಚೇರಿಯಲ್ಲಿ ಪತ್ನಿ ಸುಮನಾ ಶೆಣೈ ಹೆಸರಿನಲ್ಲಿದ್ದ 2 ಜೀವವಿಮಾ ಪಾಲಿಸಿಯನ್ನು ಪಡೆಯಲು ಪತ್ನಿ ಜೀವಂತ ಇರುವಾಗಲೇ ಆಕೆ ಮೃತಪಟ್ಟಿದ್ದಾರೆಂದು ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದನು. ಹೀಗೆ ಆತ 2 ಪಾಲಿಸಿಗಳ ಒಟ್ಟು 3,96,922 ರೂ. ಹಣವನ್ನು ಚೆಕ್ ಮೂಲಕ ಪಡೆದಿದ್ದ. ಬಳಿಕ ಆತ ತನ್ನ ಹಾಗೂ ಭಾರತಿ ಯಾನೇ ಭಾಗ್ಯಲಕ್ಷ್ಮಿ ಎಂಬಾಕೆಯ ಜಂಟಿ ಖಾತೆಗೆ ವರ್ಗಾಯಿಸಿ ನಗದು ಮಾಡಿಸಿಕೊಂಡಿದ್ದರು. ಈ ಬಗ್ಗೆ ಅಂದಿನ ಎಲ್ಐಸಿ ಶಾಖಾ ಮ್ಯಾನೇಜರ್ ಗಣೇಶ್ ಕಾಮತ್ ಬಂದರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿರುವ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಶಿಲ್ಪಾ ಎ.ಜಿ. ಆರೋಪಿ ತಪ್ಪಿತಸ್ಥನೆಂದು ಸಾಬೀತುಗೊಂಡಿರುವುದರಿಂದ ಆತನಿಗೆ 3 ವರ್ಷ 6 ತಿಂಗಳು ಕಠಿಣ ಸಜೆ ಹಾಗೂ 10 ಸಾವಿರ ರೂ. ದಂಡ, ದಂಡ ತೆರಲು ತಪ್ಪಿದ್ದಲ್ಲಿ ಒಂದು ತಿಂಗಳುಗಳ ಕಾಲ ಕಾರಾಗೃಹ ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ. ಪ್ರಕರಣದ 2ನೇ ಆರೋಪಿ ಭಾರತಿ ಯಾನೆ ಭಾಗ್ಯಲಕ್ಷ್ಮಿ ತಲೆಮರೆಸಿಕೊಂಡು ಆಕೆಯ ವಿರುದ್ಧದ ಪ್ರಕರಣ ಬೇರ್ಪಡಿಸಲಾಗಿದೆ. ಸರ್ಕಾರದ ಪರವಾಗಿ ಹಿರಿಯ ಸಹಾಯಕ ಸರಕಾರಿ ಅಭಿಯೋಜಕ ಮೋಹನ್ ಕುಮಾರ್ ಬಿ. ವಾದಿಸಿದ್ದಾರೆ.
PublicNext
07/01/2022 05:01 pm