ಮಂಗಳೂರು: ಮಾಜಿ ಶಾಸಕ ಬಿ.ಎಂ.ಇದಿನಬ್ಬರ ಪುತ್ರ ಬಿ.ಎಂ.ಬಾಷಾರ ಉಳ್ಳಾಲದಲ್ಲಿರುವ ಮಾಸ್ತಿಕಟ್ಟೆಯಲ್ಲಿದ್ದ ಮನೆಗೆ ಎನ್ಐಎ 2021ರ ಆಗಸ್ಟ್ 4ರಂದು ಏಕಾಏಕಿ ದಾಳಿ ನಡೆಸುತ್ತದೆ. ಅಂದು ವಿಚಾರಣೆ ನಡೆಸಿದ ಐಎನ್ಎ ಬಿ.ಎಂ.ಬಾಷಾ ಕಿರಿಯ ಪುತ್ರ ಅಮ್ಮರ್ ಅಬ್ದುಲ್ ರೆಹಮಾನ್ ಎಂಬಾತನನ್ನು ವಶಕ್ಕೆ ತೆಗೆದುಕೊಂಡಿತ್ತು. ಈ ವಿಚಾರ ಇಡೀ ರಾಷ್ಟ್ರಾದ್ಯಂತ ಭಾರೀ ಸಂಚಲನಗೊಂಡಿತ್ತು. ಇದಿಷ್ಟೇ ಅಲ್ಲದೆ ಬಿ.ಎಂ.ಬಾಷಾ ಓರ್ವ ಸೊಸೆಯೂ ಅಷ್ಟೇ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದಳು. ಆಕೆಯೇ ದೀಪ್ತಿ ಮಾರ್ಲ ಅಲಿಯಾಸ್ ಮರಿಯಂ.
ಇಂದು ಮತ್ತೆ ಅದೇ ಮನೆಗೆ ದಾಳಿ ನಡೆಸಿದ ಎನ್ಐಎ ದೀಪ್ತಿ ಮಾರ್ಲ ಅಲಿಯಾಸ್ ಮರಿಯಂಯನ್ನು ವಶಕ್ಕೆ ತೆಗೆದುಕೊಂಡಿದೆ. ದೀಪ್ತಿ ಮಾರ್ಲ 10 ವರ್ಷಗಳ ಹಿಂದೆ ಮಂಗಳೂರಿನ ದೇರಳಕಟ್ಟೆಯಲ್ಲಿನ ಮೆಡಿಕಲ್ ಕಾಲೇಜೊಂದರಲ್ಲಿ ಬಿಡಿಎಸ್ ವ್ಯಾಸಂಗ ಮಾಡುತ್ತಿದ್ದ ಸಂದರ್ಭ ಬಿ.ಎಂ.ಬಾಷಾ ಪುತ್ರ ಅನಾಸ್ ಪ್ರೀತಿಯ ಬಲೆಗೆ ಬೀಳುತ್ತಾಳೆ. ಹಿಂದೂವಾಗಿದ್ದ ಆಕೆ ಮುಂದೆ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡು ಆತನನ್ನು ಮದುವೆಯಾಗಿದ್ದಳು. ಆ ಬಳಿಕ ಕಟ್ಟರ್ ಇಸ್ಲಾಂ ಧರ್ಮೀಯಳಾಗಿ ಪರಿವರ್ತನೆಗೊಂಡಿದ್ದಳು.
ಆಗಸ್ಟ್ ಸಮಯದಲ್ಲಿ ಐಸಿಸ್ ನಂಟಿನ ಸಂಶಯದಿಂದ ಎನ್ಐಎ ಬಿ.ಎಂ.ಬಾಷಾರ ಪುತ್ರ ಅಮ್ಮರ್ ಅಬ್ದುಲ್ ರೆಹಮಾನ್ ರನ್ನು ವಿಚಾರಣೆ ನಡೆಸಿ ಬಂಧಿಸಿದ ಸಂದರ್ಭ ದೀಪ್ತಿ ಅಲಿಯಾಸ್ ಮರಿಯಂರನ್ನು ವಿಚಾರಣೆ ನಡೆಸಿತ್ತು. ಆದರೆ ಆಕೆಗೆ ಪುಟ್ಟ ಮಗುವಿದ್ದ ಕಾರಣ ಎರಡು ದಿನಗಳ ಕಾಲ ವಿಚಾರಣೆ ನಡೆಸಿ ಆಕೆಯನ್ನು ಬಂಧಿಸದೆ ಎನ್ಐಎ ಮರಳಿತ್ತು. ಇದೀಗ ದೀಪ್ತಿ ಅಲಿಯಾಸ್ ಮರಿಯಂ ಉಳ್ಳಾಲದಲ್ಲಿದ್ದುಕೊಂಡೇ ಉಗ್ರವಾದಿ ಸಂಘಟನೆ ಐಸಿಸ್ ಸಂಪರ್ಕದೊಂದಿಗೆ ಜಮ್ಮು ಕಾಶ್ಮೀರದ ಲಿಂಕ್ ಹೊಂದಿದ್ದಾಳೆಂಬ ಶಂಕೆ ಎನ್ಐಎಗೆ ಬಲವಾಗಿದೆ. ಅಲ್ಲದೆ ಆಕೆ ಮಂಗಳೂರಿನಲ್ಲಿ ಇದ್ದುಕೊಂಡೇ ಯುವಕರನ್ನು ಐಸಿಸ್ ಜಾಲಕ್ಕೆ ಸೆಳೆಯುವ ಕೃತ್ಯದಲ್ಲಿ ಭಾಗಿಯಾಗಿದ್ದಾಳೆ ಎನ್ನುವ ಆಧಾರದಲ್ಲಿ ಇದೀಗ ಮತ್ತೆ ಬಿ.ಎಂ.ಬಾಷಾರ ಮನೆಗೆ ದಾಳಿ ನಡೆಸಿರುವ ಎನ್ಐಎ ಮರಿಯಂಳನ್ನು ವಶಕ್ಕೆ ಪಡೆದಿದೆ.
ಇಂದು ಇಡೀ ದಿನ ಆಕೆಯನ್ನು ವಿಚಾರಣೆ ನಡೆಸಿದ ಎನ್ಐಎ ಸಂಜೆ 3ಗಂಟೆಗೆ ಬಂಧಿಸಿದೆ. ಬಳಿಕ ದೀಪ್ತಿ ಅಲಿಯಾಸ್ ಮರಿಯಂಳನ್ನು ಮಂಗಳೂರಿನ ಜಿಲ್ಲಾ ವೆನ್ಲಾಕ್ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ನಡೆಸಿದೆ. ಅಲ್ಲಿಂದ ಮಂಗಳೂರಿನ ಜಿಲ್ಲಾ ನ್ಯಾಯಾಲಯದ ಮುಂದೆ ಹಾಜರುಪಡಿಸಿರುವ ಎನ್ಐಎ ತಂಡ ಆಕೆಯನ್ನು ದೆಹಲಿಗೆ ಕರೆದೊಯ್ದಿದೆ. ಎನ್ಐಎ ನಡೆಸುವ ತನಿಖೆಯಿಂದ ಆಕೆಯ ಐಸಿಸ್ ನಂಟು ನಿಜವೇ ಎಂಬ ಸತ್ಯ ಬಯಲಾಗಲಿದೆ.
Kshetra Samachara
03/01/2022 10:31 pm