ಕಾಪು: ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಮೂಳೂರಿನಲ್ಲಿರುವ ಮನೆಗೆ ನುಗ್ಗಿದ ಪೊಲೀಸರು 68 ವರ್ಷದ ಮಹಿಳೆ ಸಹಿತ ಮೂವರಿಗೆ ಹಲ್ಲೆ ನಡೆಸಿದ್ದಾರೆ ಎಂದು ಕುಟುಂಬವೊಂದು ಆರೋಪಿಸಿದೆ.ಇಂದು ಮುಂಜಾನೆ ಈ ಘಟನೆ ನಡೆದಿದ್ದು ಮನೆಯ ಮೂವರು ಮಹಿಳೆಯರು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದು ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ.
ಸಾಮಾನ್ಯವಾಗಿ ಪೊಲೀಸರು ಮನೆಗೆ ತೆರಳುವಾಗ ಮಹಿಳಾ ಪೊಲೀಸ್ ಸಿಬ್ಬಂದಿ ಇರುತ್ತಾರೆ.ಮನೆಯಲ್ಲಿ ಮಹಿಳೆಯರು ಇಲ್ಲದ ಸಂದರ್ಭದಲ್ಲಂತೂ ಮಹಿಳಾ ಪೊಲೀಸರೇ ಮನೆಯೊಳಗೆ ಹೋಗಬೇಕು.ಆದರೆ ಇಂದು ಬೆಳಿಗ್ಗೆ ಸುಮಾರಿಗೆ ಕಾಪು ಠಾಣೆಯ ಪೊಲೀಸರು ಏಕಾಏಕಿ ಮೂಳೂರಿನಲ್ಲಿರುವ ನಮ್ಮ ಮನೆಗೆ ನುಗ್ಗಿ ದೌರ್ಜನ್ಯ ಎಸಗಿದ್ದಾರೆ ಎಂದು ಹಾಜಿ ಅಬ್ಬು ಮಹಮ್ಮದ್ ಕುಟುಂಬದವರು ಆರೋಪಿಸಿದ್ದಾರೆ.ತನಿಖೆಯ ನೆಪದಲ್ಲಿ ಮನೆಗೆ ನುಗ್ಗಿದ ಪೊಲೀಸರು, ಆಯಿಸಮ್ಮ , ಝಹರಾ ಮತ್ತು ರೆಹನಾ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಯಾವುದೇ ಸಮವಸ್ತ್ರದಲ್ಲಿ ಇರದ ಆರು ಜನ ಪೊಲೀಸರು ಮನೆ ಬಾಗಿಲು ತಟ್ಟಿದ್ದಾರೆ, ಹೆದರಿದ ಇವರು ಮನೆ ಬಾಗಿಲು ತೆರೆಯದ ಕಾರಣ ಮನೆಯ ಹಿಂಬದಿಯ ಬಾಗಿಲು ಮುರಿದು ಒಳ ನುಗ್ಗಿ ಹಲ್ಲೆ ಮಾಡಿದ್ದಾರೆ ಎಂದು ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿದ್ದ ರೆಹನಾ ದೂರಿದ್ದಾರೆ.
ಬಳಿಕ ಹಾಲು ಕರೆದು ಬರುತ್ತಿದ್ದ ಝಹರಾ ಅವರು ಅವರು ಯಾಕೆ ಮನೆಗೆ ಬಂದಿದ್ದು? ಯಾರು ನೀವೆಲ್ಲಾ ಎಂದು ಪ್ರಶ್ನಿಸಿ ತಡೆದಾಗ ಅವರಿಗೂ ಹಲ್ಲೆ ಮಾಡಿ, ಬಟ್ಟೆಯನ್ನು ಹರಿದು ಹಾಕಿದ್ದಾಗಿ ದೂರಿದ್ದಾರೆ. ಈ ಸಂದರ್ಭ ಆರವತ್ತೆಂಟು ವರ್ಷದ ಆಯಿಸಮ್ಮ ಅವರಿಗೂ ಹಲ್ಲೆ ಮಾಡಿದ್ದಾರೆಂದು ಆರೋಪಿಸಿದ್ದಾರೆ.ಸದ್ಯ ಆಯಿಸಮ್ಮ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಾನು ಸಾವಿನ ಮನೆಗೆ ಹೋಗಿದ್ದೆ, ಮನೆಯಲ್ಲಿ ಯಾರೂ ಗಂಡಸರು ಇಲ್ಲದ ಸಮಯ ಮನೆಬಾಗಿಲು ಮುರಿದು, ಮಹಿಳೆಯರಿಗೆ ಹಲ್ಲೆ ಮಾಡಿ ಮನೆಯ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿದ್ದಾರೆ. ನಾವು ಹೈನುಗಾರಿಕೆ ನಡೆಸಿ ಜೀವನ ನಡೆಸುತ್ತಿದ್ದೇವೆ.ಜೀವನೋಪಾಯಕ್ಕೆ ದನಗಳನ್ನು ಸಾಕುತ್ತಿದ್ದೇವೆ.ಪೊಲೀಸರು ಪದೇಪದೆ ಬಂದು ನಮ್ಮ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ ಎಂದು ಮನೆಯ ಮಾಲೀಕ ಹಾಜಿ ಅಬ್ಬು ಮಹಮದ್ ಹೇಳಿದ್ದಾರೆ.
ಸದ್ಯ ಮನೆಯ ಮೂವರು ಮಹಿಳೆಯರು ಉಡುಪಿಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ನಾವು ಹೈನುಗಾರಿಕೆ ನಡೆಸಿ ಜೀವನ ನಡೆಸುತ್ತಿದ್ದೇವೆ.ಪದೇಪದೇ ಪೊಲೀಸರು ಆಗಮಿಸಿ ತನಿಖೆ ನೆಪದಲ್ಲಿ ದೌರ್ಜನ್ಯ ನಡೆಸುತ್ತಿದ್ದಾರೆ.ನಮಗೆ ನ್ಯಾಯ ಬೇಕು ಎಂದು ಈ ಕುಟುಂಬದ ಸದಸ್ಯರು ಆಗ್ರಹಿಸಿದ್ದಾರೆ.
Kshetra Samachara
10/12/2021 06:49 pm