ಕುಂದಾಪುರ: ತಾಲೂಕಿನ ಅಮಾಸೆಬೈಲು ಮಚ್ಚಟ್ಟು ಸಮೀಪ ಮೂರು ದಿನಗಳ ಹಿಂದೆ ನವಜಾತ ಶಿಶುವನ್ನು ಎಸೆದು ಹೋದ ಪೈಶಾಚಿಕ ಘಟನೆಗೆ ಸಂಬಂಧಿಸಿದಂತೆ ಓರ್ವ ಮಹಿಳೆ ಮತ್ತು ಆಕೆಯ ಸ್ನೇಹಿತನನ್ನು ಅಮಾಸೆಬೈಲು ಪೊಲೀಸರು ಬಂಧಿಸಿದ್ದಾರೆ.
ರಾಧಾ (40) ಹಾಗೂ ಸತೀಶ್ (43) ಬಂಧಿತರು. ಇಬ್ಬರು ಕೂಡ ಕೊಲ್ಲೂರು ಸಮೀಪದ ಜಡ್ಕಲ್-ಮುದೂರಿನವರು ಎನ್ನಲಾಗಿದ್ದು, ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ. ಆರೋಪಿಗಳಿಬ್ಬರೂ ವಿವಾಹಿತರಾಗಿದ್ದು, ಕಳೆದ ಒಂದು ವರ್ಷದಿಂದ ಈಚೆಗೆ ರಾಧಾ, ಸತೀಶ್ ಇಬ್ಬರೂ ಅನ್ಯೋನ್ಯವಾಗಿದ್ದರು.
ಡಿ.1ರಂದು ಮಚ್ಚಟ್ಟು ಗ್ರಾಮದ ಸೇತುವೆ ಬಳಿಯ ಪೊದೆಯಲ್ಲಿ ಮಗು ಅಳುವ ಧ್ವನಿ ಕೇಳಿ ಸ್ಥಳೀಯ ನಿವಾಸಿ ಗೀತಾ ಅವರು ಸ್ಥಳಕ್ಕೆ ತೆರಳಿ ನೋಡಿ ಮಗುವನ್ನು ಎತ್ತಿ ಪೊಲೀಸ್ ಠಾಣೆಗೆ ತಂದಿದ್ದರು. ಸುಮಾರು 7 ದಿನಗಳ ನವಜಾತ ಹೆಣ್ಣು ಮಗು ಅದಾಗಿತ್ತು. ಅಮಾಸೆಬೈಲು ಪಿಎಸ್ಐ ಸುಬ್ಬಣ್ಣ ಹಾಗೂ ಸಿಬ್ಬಂದಿ ಮಗುವನ್ನು ಪೋಷಿಸಿ ಹೆಚ್ಚಿನ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಿದ್ದರು. ಮಗುವಿನ ಆರೋಗ್ಯ ಸ್ಥಿರವಾಗಿದೆ ಎಂಬ ಮಾಹಿತಿ ಲಭಿಸಿದೆ. ಮಗು ಸಂಪೂರ್ಣ ಚೇತರಿಸಿಕೊಂಡ ಬಳಿಕ ಮಕ್ಕಳ ರಕ್ಷಣಾ ಘಟಕ, ಮಕ್ಕಳ ಕಲ್ಯಾಣ ಸಮಿತಿಯವರು ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ.
Kshetra Samachara
04/12/2021 09:31 pm