ಮಂಗಳೂರು: ತಾನು ಮಾಡದಿರುವ ತಪ್ಪಿಗೆ ಸೌದಿ ಅರೇಬಿಯಾದಲ್ಲಿ ಮಂಗಳೂರಿನ ವ್ಯಕ್ತಿಯೊಬ್ಬರು ಬಂಧಿತರಾಗಿದ್ದಾರೆ.
ಹೌದು, ಫೇಸ್ ಬುಕ್ ನಲ್ಲಿ ಸೌದಿ ದೊರೆ ಮತ್ತು ಇಸ್ಲಾಂ ವಿರುದ್ಧ ಪೋಸ್ಟ್ ಹಾಕಿದ್ದಾರೆ ಎಂಬ ಸುಳ್ಳು ಆರೋಪದಡಿ ಕಳೆದ ಒಂದೂವರೆ ವರ್ಷದಿಂದ ಸೌದಿಯಲ್ಲಿ ಬಂಧನದಲ್ಲಿರುವ ಮಂಗಳೂರಿನ ಶೈಲೇಶ್ ಕೊಟ್ಟಾರಿ ಬಿಡುಗಡೆಗೆ ಕ್ರಮ ಕೈಗೊಳ್ಳುವಂತೆ ಅವರ ಕುಟುಂಬಸ್ಥರು ಮನವಿ ಮಾಡಿದ್ದಾರೆ.
ನಗರದ ಬಿಕರ್ನಕಟ್ಟೆಯ ಶೈಲೇಶ್ 25 ವರ್ಷಗಳಿಂದ ಸೌದಿ ಅರೇಬಿಯಾದಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರು ತನ್ನ ಫೇಸ್‌ಬುಕ್‌ನಲ್ಲಿ ದೇಶಪ್ರೇಮ ವ್ಯಕ್ತಪಡಿಸಿ ಪೋಸ್ಟ್ ಹಾಕುತ್ತಿದ್ದರು. "ಇದನ್ನು ಫೇಸ್‌ಬುಕ್‌ನಿಂದ ತೆಗೆಯಬೇಕು ಇಲ್ಲದಿದ್ದರೆ, ನಿನ್ನನ್ನು ಸೌದಿಯಲ್ಲಿ ಉಳಿಯಲು ಬಿಡುವುದಿಲ್ಲ. ನಿನ್ನನ್ನು ಸೌದಿಯಲ್ಲೇ ಮುಗಿಸಿ ಹಾಕುತ್ತೇನೆ" ಎಂದು ಬೆದರಿಸಿ ಕರೆ ಮಾಡಲಾಗಿತ್ತು. ಇದರಿಂದ ಬೆದರಿದ ಶೈಲೇಶ್ ತಮ್ಮ ಹೆಸರಿನ ಫೇಸ್‌ಬುಕ್ ಖಾತೆಯನ್ನೇ ಅಳಿಸಿ ಹಾಕಿದ್ದರು.
ನಂತರ 2020 ಜನವರಿ 16ರಂದು ಫೇಸ್‌ಬುಕ್‌ನಲ್ಲಿ ಶೈಲೇಶ್ ಹೆಸರಲ್ಲಿ ಫೇಕ್ ಐಡಿ ಸೃಷ್ಟಿಯಾಗಿದ್ದು, ಅದರಲ್ಲಿ ಫೆಬ್ರವರಿ 12 ಮತ್ತು 15ರಂದು ಇಸ್ಲಾಂ ವಿರೋಧಿ ಪೋಸ್ಟ್‌ಗಳು ಹಾಗೂ ಸೌದಿ ದೊರೆ ವಿರುದ್ಧ ಅನೇಕ ಪೋಸ್ಟ್ ಹಾಕಲಾಗಿತ್ತು. ಈ ಬಗ್ಗೆ ಶೈಲೇಶ್ ತಾನು ಕೆಲಸ ಮಾಡುವ ಕಂಪೆನಿಗೆ ಮಾಹಿತಿ ನೀಡಿದಾಗ, ಕಂಪೆನಿ ಪೊಲೀಸರಿಗೆ ದೂರು ನೀಡುವಂತೆ ಸೂಚಿಸಿತ್ತು. ಅದರಂತೆ 2020ರ ಫೆಬ್ರವರಿ 23ರಂದು ಖುದ್ದು ದೂರು ನೀಡಲು ಠಾಣೆಗೆ ತೆರಳಿದಾಗ, ಅಲ್ಲಿನ ಪೊಲೀಸರು ಶೈಲೇಶ್ ಅವರನ್ನೇ ಬಂಧಿಸಿದ್ದಾರೆ. ಇದನ್ನರಿತ ಕುಟುಂಬ ಮಂಗಳೂರು ನಗರ ಸೈಬರ್ ಕ್ರೈಂ ಠಾಣೆಗೂ, 2021 ಆಗಸ್ಟ್ 28ರಂದು ಮಂಗಳೂರು ನಗರ ಪೊಲೀಸ್ ಆಯುಕ್ತರಿಗೂ ದೂರು ನೀಡಿದ್ದರು. ಈ ಬಗ್ಗೆ ಸಂಸದ ನಳಿನ್ ಕುಮಾರ್ ಕಟೀಲ್ ಮುಖಾಂತರ ವಿದೇಶಾಂಗ ಇಲಾಖೆಗೆ ದೂರು ನೀಡಿದ್ದರೂ ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಶೈಲೇಶ್ ಪತ್ನಿ ಸರಿತಾ ಆರೋಪಿಸಿದ್ದಾರೆ.
Kshetra Samachara
12/11/2021 10:23 pm