ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಪ್ಪಿನಂಗಡಿ: ರಸ್ತೆ ಬದಿ ಪತ್ತೆಯಾದ ಗ್ರೆನೇಡ್ ಸೇನೆಯದ್ದು; ಎಸ್ಪಿ ಮಾಹಿತಿ

ಉಪ್ಪಿನಂಗಡಿ: ಬೆಳ್ತಂಗಡಿ ತಾಲೂಕಿನ ಹಾಗೂ ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಇಳಂತಿಲ ಗ್ರಾಮದಲ್ಲಿ ನಿನ್ನೆ ಪತ್ತೆಯಾದ ಐದು ಗ್ರೆನೇಡ್‌ಗಳು ಸೇನಾ ಫ್ಯಾಕ್ಟರಿಯಲ್ಲೇ ತಯಾರಾಗಿರುವುದು ಎಂದು ದ.ಕ. ಜಿಲ್ಲಾ ಎಸ್‌ಪಿ ಋಷಿಕೇಶ್ ಭಗವಾನ್ ಸೋನಾವಣೆ ಹೇಳಿದ್ದಾರೆ.

ಇಳಂತಿಲ ಗ್ರಾಮದ ಜಯಕುಮಾರ್ ಎಂಬವರು ನಿನ್ನೆ ತನ್ನ ಮನೆಗೆ ತೆರಳುತ್ತಿದ್ದಾಗ ಗ್ರೆನೇಡ್‌ಗಳು ಅವರಿಗೆ ಗೋಚರಿಸಿವೆ. ಬಳಿಕ ಗ್ರೆನೇಡ್‌ಗಳನ್ನು ಇತರರಿಗೆ ತೊಂದರೆ ಆಗದಂತೆ ಸುರಕ್ಷಿತವಾಗಿರಿಸಿದ ಅವರು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಪೊಲೀಸರು ಸ್ಥಳಕ್ಕಾಗಮಿಸಿ ಬಾಂಬ್ ನಿಷ್ಕ್ರಿಯ ದಳದ ನೆರವಿನೊಂದಿಗೆ ಎಲ್ಲ ಗ್ರೆನೇಡ್‌ಗಳನ್ನು ವಶಕ್ಕೆ ಪಡೆದಿದ್ದಾರೆ. ಜಯಕುಮಾರ್ ಭೂಸೇನಾ ರೆಜಿಮೆಂಟ್‌ನಲ್ಲಿ ಎಸ್‌ಸಿಒ ಆಗಿ ನಿವೃತ್ತಿ ಹೊಂದಿದ್ದು, ಈ ಹಿನ್ನೆಲೆಯಲ್ಲಿ ಗ್ರೆನೇಡ್‌ಗಳ ಬಗ್ಗೆ ಮಾಹಿತಿ ಇರುವುದರಿಂದ ಇದರ ಕುರಿತು ಪೊಲೀಸರಿಗೆ ತಿಳಿಸಿದ್ದಾರೆ.

ಈ ಬಗ್ಗೆ ಹೇಳಿಕೆ ನೀಡಿರುವ ಎಸ್‌ಪಿ ಋಷಿಕೇಶ್ ಭಗವಾನ್, ಈ ಗ್ರೆನೇಡ್‌ಗಳು ಸೇನಾ ಫ್ಯಾಕ್ಟರಿಯಲ್ಲೇ ತಯಾರಾಗಿರುವ ಬಗ್ಗೆ ತಿಳಿದು ಬಂದಿದೆ.1979-83 ದಿನಾಂಕವೂ ಇದೆ. ಅಂದರೆ, ಸುಮಾರು 40 ವರ್ಷಗಳಷ್ಟು ಹಳೆ ಗ್ರೆನೇಡ್‌ ಗಳಿವು. ಇದಕ್ಕೆ ಸಂಬಂಧಿಸಿ ಪ್ರಕರಣ ದಾಖಲಿಸಿ, ತನಿಖೆ ಆರಂಭಿಸಲಾಗಿದೆ. ಈ ಬಗ್ಗೆ ಸೇನಾಧಿಕಾರಿಗಳನ್ನು ಸಂಪರ್ಕಿಸಿ, ಹೆಚ್ಚಿನ ಮಾಹಿತಿ ಪಡೆಯಲಾಗುತ್ತಿದೆ ಎಂದರು.

Edited By : Shivu K
Kshetra Samachara

Kshetra Samachara

08/11/2021 11:28 am

Cinque Terre

10.18 K

Cinque Terre

1