ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೋಟ ಡಬಲ್ ಮರ್ಡರ್: ಸುಪ್ರೀಂ ನಲ್ಲಿ ಮತ್ತೊಮ್ಮೆ ಆರೋಪಿಯ ಜಾಮೀನು ಅರ್ಜಿ ತಿರಸ್ಕೃತ!

ಕುಂದಾಪುರ : ಕೋಟ ಮಣೂರು ಅವಳಿ ಕೊಲೆ ಪ್ರಕರಣದ ಆರೋಪಿ, ಜಿಪಂ ಮಾಜಿ ಸದಸ್ಯ ಬಾರಿಕೆರೆ ರಾಘವೇಂದ್ರ ಕಾಂಚನ್ ಜಾಮೀನು ಅರ್ಜಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್, ಈ ಪ್ರಕರಣದ ವಿಚಾರಣೆಯನ್ನು ಮುಂದಿನ ಆರು ತಿಂಗಳೊಳಗೆ ಪೂರ್ಣಗೊಳಿಸುವಂತೆ ಕುಂದಾಪುರದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಆದೇಶ ನೀಡಿದೆ.

2019ರ ಜ.26ರಂದು ಗೆಳೆಯರಾದ ಯತೀಶ್ ಕಾಂಚನ್ ಹಾಗೂ ಭರತ್ ರನ್ನು ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾರಿಕೆರೆ ರಾಘವೇಂದ್ರ ಕಾಂಚನ್ ಸೇರಿದಂತೆ ಒಟ್ಟು 18 ಮಂದಿ ಆರೋಪಿಗಳನ್ನು ಕೋಟ ಪೊಲೀಸರು ಬಂಧಿಸಿದ್ದರು.

ಆರೋಪಿಗಳ ಪೈಕಿ ರಾಘವೇಂದ್ರ ಕಾಂಚನ್‌ಗೆ ಹೈಕೋರ್ಟ್ 2019ರಲ್ಲಿ ಜಾಮೀನು ನೀಡಿತ್ತು. ಆದರೆ ಭರತ್ ತಾಯಿ ಪಾರ್ವತಿ, ಈ ಜಾಮೀನು ರದ್ದುಗೊಳಿಸುವಂತೆ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅದರಂತೆ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್ 2020ರ ಜ.20ರಂದು ರಾಘವೇಂದ್ರ ಕಾಂಚನ್‌ನ ಜಾಮೀನು ವಜಾಗೊಳಿಸಿ ಆದೇಶ ನೀಡಿತ್ತು. ಇದೀಗ ಎರಡನೇ ಬಾರಿಗೆ ರಾಘವೇಂದ್ರ ಕಾಂಚನ್ ಜಾಮೀನಿಗಾಗಿ ಸುಪ್ರೀಂಗೆ ಅರ್ಜಿ ಸಲ್ಲಿಸಿದ್ದರು.ಈ ಅರ್ಜಿಯನ್ನು ಕೂಡ ಸುಪ್ರೀಂಕೋರ್ಟ್‌ ತಿರಸ್ಕರಿಸಿದ್ದು, ಒಂದು ವೇಳೆ ಮುಂದಿನ ಆರು ತಿಂಗಳಲ್ಲಿ ಪ್ರಕರಣದ ವಿಚಾರಣೆ ಪೂರ್ಣಗೊಳ್ಳದೇ ಇದ್ದಲ್ಲಿ ಮತ್ತೆ ಜಾಮೀನಿಗಾಗಿ ಸಂಬಂಧಪಟ್ಟ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಬಹುದು ಎಂದು ಸುಪ್ರೀಂಕೋರ್ಟ್ ನ್ಯಾಯಾಧೀಶರಾದ ಇಂದಿರಾ ಬ್ಯಾನರ್ಜಿ ಹಾಗೂ ಜೆ.ಕೆ. ಮಹೇಶ್ವರಿ ಅವರಿದ್ದ ದ್ವಿ ಸದಸ್ಯ ಪೀಠ ಆದೇಶದಲ್ಲಿ ತಿಳಿಸಿದೆ.

Edited By : Nirmala Aralikatti
Kshetra Samachara

Kshetra Samachara

29/10/2021 03:10 pm

Cinque Terre

11.96 K

Cinque Terre

0