ಮಂಗಳೂರು: ನಗರದ ಅಡ್ಯಾರ್ ನೇತ್ರಾವತಿ ನದಿತೀರದಲ್ಲಿ ಅಕ್ರಮ ಮರಳು ಸಾಗಾಟ ನಡೆಯುತ್ತಿರುವುದನ್ನು ಪತ್ತೆ ಹಚ್ಚಿರುವ ಪೊಲೀಸರು, ಅಕ್ರಮ ಸಾಗಾಟದ ಲಾರಿ ತಡೆಯಲು ಯತ್ನಿಸಿದ ವೇಳೆ ದುಷ್ಕರ್ಮಿಗಳು ಪೊಲೀಸರ ಮೇಲೆಯೇ ಲಾರಿ ಹತ್ತಿಸಲು ಯತ್ನಿಸಿದ ಘಟನೆ ಬುಧವಾರ ನಸುಕಿನ ಜಾವ ನಡೆದಿದ್ದು, ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಟಿಪ್ಪರ್ ಲಾರಿ ಚಾಲಕ ಅಬ್ದುಲ್ ಇಸಾಕ್, ಆಲ್ಟೋ ಕಾರು ಚಾಲಕ ಮೊಯಿದ್ದೀನ್ ಅಫ್ಸರ್ ಬಂಧಿತರು. ಅಕ್ರಮ ಮರಳುಗಾರಿಕೆ ಬಗ್ಗೆ ಖಚಿತ ಮಾಹಿತಿ ಮೇರೆಗೆ ಮಂಗಳೂರು ಗ್ರಾಮಾಂತರ ಠಾಣೆ ಪೊಲೀಸರು ಬುಧವಾರ ಮುಂಜಾವ ಅಡ್ಯಾರ್ ಸಮೀಪದ ವಾಹನ ತಪಾಸಣೆ ನಡೆಸುತ್ತಿದ್ದರು. ಆಗ ಅಡ್ಯಾರ್ ನೇತ್ರಾವತಿ ನದಿ ಹಾಗೂ ಮರಳು ಧಕ್ಕೆ ಕಡೆಯಿಂದ ಟಿಪ್ಪರ್ ಲಾರಿಯೊಂದು ಬರುತ್ತಿದ್ದು, ವಾಹನ ನಿಲ್ಲಿಸುವಂತೆ ಪೊಲೀಸರು ಸೂಚಿಸಿದ್ದಾರೆ. ಆದರೆ, ಲಾರಿ ಹಿಂದಿನಿಂದ ಬಂದ ಆಲ್ಟೋ ಕಾರ್ ನಲ್ಲಿದ್ದ ದುಷ್ಕರ್ಮಿ ಲಾರಿಯನ್ನು ನಿಲ್ಲಿಸದಂತೆ ಸೂಚನೆ ನೀಡಿದ್ದಾನೆ. ಲಾರಿ ನಿಲ್ಲಿಸದೆ ಫರಂಗಿಪೇಟೆ ಕಡೆಗೆ ವೇಗವಾಗಿ ಹೋಗಿದೆ. ಪೊಲೀಸರು ವಾಹನಗಳನ್ನು ಬೆನ್ನಟ್ಟಿ ಹೋಗಿದ್ದಾರೆ.
ಬಂಟ್ವಾಳ ಗ್ರಾಮಾಂತರ ಪೊಲೀಸರು ಫರಂಗಿಪೇಟೆ ಚೆಕ್‌ಪೋಸ್ಟ್‌ನಲ್ಲಿ ಬ್ಯಾರಿಕೇಡ್ ಹಾಕಿ ವಾಹನಗಳನ್ನು ತಪಾಸಣೆ ನಡೆಸುತ್ತಿದ್ದರು. ಈ ವೇಳೆ ಮಂಗಳೂರು ಕಡೆಯಿಂದ ಬಂದ ಟಿಪ್ಪರ್ ಲಾರಿಯನ್ನು ನಿಲ್ಲಿಸಲು ಪೊಲೀಸರು ಸೂಚಿಸಿದ್ದಾರೆ. ಆದರೂ ಚಾಲಕ ಲಾರಿಯನ್ನು ವೇಗವಾಗಿ ಚಲಾಯಿಸಿ, ಪೊಲೀಸರ ಮೇಲೆಯೇ ವಾಹನ ಹತ್ತಿಸಲು ಯತ್ನಿಸಿದ್ದಾನೆ. ಈ ಬಗ್ಗೆ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಸಂಬಂಧ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ. ಟಿಪ್ಪರ್ ಲಾರಿ, ಕಾರನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.
Kshetra Samachara
21/10/2021 10:57 pm