ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಮನೆಯ ಕಿಟಿಕಿ ಒಡೆದು ಬೆಳ್ಳಿ ಸಾಮಗ್ರಿ, ನಗದು ಕಳವು

ಮುಲ್ಕಿ: ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಪಂಚಮಹಲ್ ಸದಾಶಿವ ದೇವಸ್ಥಾನದ ಬಳಿಯಲ್ಲಿ ರಾಮದಾಸ್ ಕಾಮತ್ ಎಂಬವರ ಮನೆಗೆ ನುಗ್ಗಿದ ಕಳ್ಳರು ಬೆಳ್ಳಿ ಸಾಮಗ್ರಿ ಹಾಗೂ ಅಲ್ಪ ಸ್ವಲ್ಪ ನಗದನ್ನು ಕಳ್ಳತನ ಮಾಡಿದ್ದಾರೆ.

ರಾಮದಾಸ ಕಾಮತ್ ಕಳೆದ 20 ದಿನಗಳ ಹಿಂದೆ ತಮ್ಮ ಮಗಳ ಮದುವೆ ನಡೆದ ಬಳಿಕ ಬೆಂಗಳೂರಿನಲ್ಲಿರುವ ತಮ್ಮ ಮಗನ ಮನೆಗೆ ತೆರಳಿದ್ದರು. ಇದನ್ನೇ ಗಮನಿಸಿಕೊಂಡು ಕಳ್ಳರು ಮನೆ ಹಿಂಭಾಗದ ಕಿಟಕಿಯನ್ನು ಒಡೆದು ಮನೆಯೊಳಗೆ ನುಗ್ಗಿ ಮೂರು ಕಪಾಟುಗಳನ್ನು ಜಾಲಾಡಿ ವಸ್ತು, ಬಟ್ಟೆಗಳನ್ನು ಚೆಲ್ಲಾಪಿಲ್ಲಿ ಮಾಡಿ ಜಾಲಾಡಿ ಸ್ವಲ್ಪ ನಗದು ಹಾಗೂ ಬೆಳ್ಳಿ ಸಾಮಗ್ರಿಗಳನ್ನು ಕಳ್ಳತನ ಮಾಡಿದ್ದಾರೆ.

ರಾಮದಾಸ ಕಾಮತ್ ಮನೆಯ ಸಮೀಪ ಸದಾಶಿವ ದೇವಸ್ಥಾನದ ಬಳಿಯಲ್ಲಿ ನೂತನ ಕಟ್ಟಡ ಕಾಮಗಾರಿ ನಡೆಯುತ್ತಿದ್ದು, ಅಲ್ಲಿಂದ ಕಳ್ಳರು ಡ್ರಿಲ್ ಮಷೀನ್, ಕಟ್ಟರ್ ತೆಗೆದುಕೊಂಡು ಬಂದು ಕಿಟಕಿಯನ್ನು ತುಂಡರಿಸಿ ಕೆಲ ಸಾಮಾನುಗಳನ್ನು ಅಲ್ಲಿಯೇ ಬಿಟ್ಟು ಹೋಗಿದ್ದಾರೆ. ಕೆಲ ದಿನಗಳ ಹಿಂದೆ ಕಟ್ಟಡದ ಕಾಮಗಾರಿ ನಡೆಸುತ್ತಿರುವ ಕಾರ್ಮಿಕರು ಡ್ರಿಲ್ ಮಷೀನ್ ಕಾಣೆಯಾದ ಬಗ್ಗೆ ಸ್ಥಳೀಯವಾಗಿ ಹೇಳಿಕೊಂಡಿದ್ದರು.

ಈ ನಡುವೆ ಬೆಂಗಳೂರಿಗೆ ತೆರಳಿದ್ದ ರಾಮದಾಸ ಕಾಮತ್ ತಮ್ಮ ಮನೆಯ ಗಿಡಗಳಿಗೆ ನೀರು ಹಾಕಲು ಯುವತಿಯನ್ನು ನೇಮಿಸಿದ್ದರು. ಆ ಯುವತಿಯು ಶುಕ್ರವಾರ ಬೆಳಿಗ್ಗೆ ಬಂದು ನೋಡಿದಾಗ ಕಿಟಕಿ ಒಡೆದಿರುವುದು ಗಮನಕ್ಕೆ ಬಂದಿದೆ. ಕೂಡಲೇ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಮುಲ್ಕಿ ನ.ಪಂ ಸದಸ್ಯ ಬಾಲಚಂದ್ರ ಕಾಮತ್, ಎಎಸ್ಐ ಚಂದ್ರಶೇಖರ್ ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಸುಮಾರು 25 ಸಾವಿರಕ್ಕೂ ಹೆಚ್ಚು ಮೌಲ್ಯದ ಬೆಳ್ಳಿ ಸಾಮಗ್ರಿ ಹಾಗೂ ಹಣ ಕಳ್ಳತನ ನಡೆದಿದ್ದು, ಚಿನ್ನವನ್ನು ಸುರಕ್ಷಿತ ಜಾಗದಲ್ಲಿ ಇಟ್ಟಿದ್ದರಿಂದ ಭಾರೀ ಕಳ್ಳತನ ತಪ್ಪಿದೆ.

Edited By : Manjunath H D
Kshetra Samachara

Kshetra Samachara

15/10/2021 09:46 pm

Cinque Terre

25.18 K

Cinque Terre

0