ಮಂಗಳೂರು: ನಗರದ ಮೂಡುಶೆಡ್ಡೆಯಲ್ಲಿ ಬುಧವಾರ ನಡೆದ ಹಲ್ಲೆ ಪ್ರಕರಣಕ್ಕೆ ಪ್ರತಿಯಾಗಿ ನಿನ್ನೆ ನಡೆದ ಮರು ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ 5 ಮಂದಿ ಆರೋಪಿಗಳನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಅಕ್ಟೋಬರ್ 6ರಂದು ರಾತ್ರಿ 11ರ ವೇಳೆಗೆ ವ್ಯಕ್ತಿಯೋರ್ವ ತನ್ನ ಸ್ನೇಹಿತರ ಜತೆ ನಿಂತಿರುವಾಗ ನಾಲ್ಕು ಮಂದಿ ಆರೋಪಿಗಳು ಬಂದು ಸ್ಥಳೀಯ ರಾಜಕೀಯ ಮುಖಂಡರೊಬ್ಬರಿಗೆ ಸಾಮಾಜಿಕ ಜಾಲತಾಣದಲ್ಲಿ ಬೆಂಬಲ ವ್ಯಕ್ತಪಡಿಸಿ ಪೋಸ್ಟ್ ಹಾಕಿದ ಹಿನ್ನೆಲೆಯಲ್ಲಿ ಹಲ್ಲೆ ನಡೆಸಿದ್ದರು ಎಂದು ಆರೋಪಿಸಲಾಗಿತ್ತು. ಈ ಬಗ್ಗೆ ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇದಕ್ಕೆ ಪ್ರತಿಯಾಗಿ ಮರುದಿನ ಸಂಜೆ ಹಲ್ಲೆಗೊಳಗಾದವ, ಆತನ ಸಹೋದರ ಹಾಗೂ ಇತರ ಹಲವರು ಮೂಡುಶೆಡ್ಡೆ ಪರಿಸರಕ್ಕೆ ಮಾರಕಾಯುಧದೊಂದಿಗೆ ಬಂದು ಸಾರ್ವಜನಿಕ ಸ್ಥಳದಲ್ಲಿ ಅಸಭ್ಯವಾಗಿ ವರ್ತಿಸಿ ಭಯದ ವಾತಾವರಣ ನಿರ್ಮಿಸಿದ್ದು, ಈ ಬಗ್ಗೆ ವೀಡಿಯೊ ವೈರಲ್ ಆಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ 5 ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಪೈಕಿ ಇಬ್ಬರಿಗೆ ಅಪರಾಧ ಹಿನ್ನೆಲೆ ಇದೆ. ಕತ್ತಿ ಹಿಡಿದು ಓಡಾಡುತ್ತಿದ್ದವನ ವಿರುದ್ಧ ಮಂಗಳೂರು ಗ್ರಾಮಾಂತರ ಮತ್ತು ಸುರತ್ಕಲ್‌ನಲ್ಲಿ 2 ಪ್ರಕರಣ ಇದೆ. ಇನ್ನೋರ್ವನ ವಿರುದ್ಧ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ. ಇವರಿಬ್ಬರು ಕಾವೂರು ಠಾಣೆಯ ರೌಡಿ ಶೀಟರ್ ಗಳಾಗಿದ್ದಾರೆ.
Kshetra Samachara
08/10/2021 04:52 pm