ಉಪ್ಪಿನಂಗಡಿ : ಕಳೆದ ಕೆಲವು ತಿಂಗಳಿಂದ ಉಪ್ಪಿನಂಗಡಿ ಸಮೀಪದ 34ನೇ ನೆಕ್ಕಿಲಾಡಿಯಿಂದ ನಾಪತ್ತೆಯಾದ ವ್ಯಕ್ತಿಗೆ ಉಗ್ರರ ಜಾಲದ ಸಂಪರ್ಕ ಇದೆಯೆಂಬ ಮಾಹಿತಿ ಕೇಳಿ ಬರುತ್ತಿದೆ. ಈ ಬಗ್ಗೆ ಹಲವಾರು ಮಾಧ್ಯಮಗಳಲ್ಲಿ ಈ ವರದಿ ಪ್ರಕಟವಾಗುತ್ತಿದ್ದಂತೆಯೇ ಸ್ಥಳೀಯ ಜನರು ಬೆಚ್ಚಿ ಬಿದ್ದಿದ್ದಾರೆ.
ಇತ್ತೀಚೆಗೆ ಉತ್ತರ ಭಾರತದಲ್ಲಿ ವಿಶೇಷ ಪೋಲಿಸ್ ತಂಡದಿಂದ ಬಂಧಿತರಾದ ಆರು ಮಂದಿ ಶಂಕಿತ ಉಗ್ರರ ತಂಡದಲ್ಲಿ ಉಪ್ಪಿನಂಗಡಿ ಸಮೀಪದ ಈ ವ್ಯಕ್ತಿಯೂ ಇದ್ದಾನೆ ಎನ್ನಲಾಗಿದೆ. ಈ ಉಗ್ರರ ತಂಡವು ದಸರಾ ವೇಳೆಯಲ್ಲಿ ಬಾಂಬ್ ಸ್ಫೋಟ ನಡೆಸುವ ಸಂಚು ನಡೆಸಿದ ಹಿನ್ನೆಲೆಯಲ್ಲಿ ಬಂಧನವಾಗಿದೆ ಎನ್ನಲಾಗಿದೆ.
ಉಪ್ಪಿನಂಗಡಿ ಸಮೀಪದ ನೆಕ್ಕಿಲಾಡಿಯಲ್ಲಿದ್ದ ವ್ಯಕ್ತಿ ಮೂಲತಃ ಉತ್ತರ ಪ್ರದೇಶ ಮೂಲದವನಾಗಿದ್ದು, ನೆಕ್ಕಿಲಾಡಿಯಿಂದ ವಿವಾಹವಾಗಿ ಇಲ್ಲಿನ ಫ್ಲಾಟ್ ವೊಂದರಲ್ಲಿ ವಾಸ್ತವ್ಯವಿದ್ದ ಹಾಗೂ ಗ್ಯಾರೇಜೊಂದರಲ್ಲಿ ಮೆಕಾನಿಕಲ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಎನ್ನಲಾಗುತ್ತಿದೆ. 18.07.2021 ರಂದು ಈತ ನಾಪತ್ತೆಯಾಗಿದ್ದ. ನಾಪತ್ತೆಯಾದ ವ್ಯಕ್ತಿಯನ್ನು ರಫೀಕ್ ಖಾನ್ (45) ಎಂದು ಗುರುತಿಸಲಾಗಿದ್ದು ಈತ ನಾಪತ್ತೆಯಾದ ಬಗ್ಗೆ ಈತನ ಪತ್ನಿ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಜುಲೈ 17ರಂದು ಬೆಂಗಳೂರಿಗೆಂದು ತೆರಳಿದ್ದ ಈತನು ಮನೆಗೆ ಜುಲೈ 18ರಂದು ಕೊನೆಯ ಕರೆ ಮಾಡಿದ್ದು ಬಳಿಕ ನಾಪತ್ತೆಯಾಗಿದ್ದಾನೆ ಎಂದು ತಿಳಿದು ಬಂದಿದೆ.
Kshetra Samachara
21/09/2021 05:18 pm