ಮಂಗಳೂರು: ಪುತ್ತೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಸರಕಾರಿ ಬಸ್ಸಿನಲ್ಲಿದ್ದ ಯುವತಿಯರಿಬ್ಬರ ಜತೆಗೆ ಯುವಕನೋರ್ವ ಮಾತನಾಡಿದ್ದನೆಂದು ಆರೋಪಿಸಿ ಭಜರಂಗದಳ ಕಾರ್ಯಕರ್ತರು ಬಸ್ಸನ್ನು ತಡೆದು ಸುಳ್ಯ ಪೊಲೀಸ್ ಠಾಣೆ ಮೆಟ್ಟಿಲೇರಿಸಿದ ಪ್ರಕರಣ ತಡರಾತ್ರಿ ನಡೆದಿದೆ. ಆದರೆ ಬಸ್ಸಿನಲ್ಲಿದ್ದ ಯುವತಿಯರಿಗೂ ಆರೋಪಿತ ಯುವಕನಿಗೂ ಪರಸ್ಪರ ಪರಿಚಯ ಕೂಡಾ ಇರಲಿಲ್ಲ ಎನ್ನಲಾಗಿದ್ದು, ಬಳಿಕ ಪ್ರಕರಣ ಠಾಣೆಯಲ್ಲೇ ಇತ್ಯರ್ಥಗೊಂಡಿದೆ.
ಪುತ್ತೂರಿಗೆ ಕೆಲಸದ ನಿಮಿತ್ತ ಬಂದಿದ್ದ ಬೆಂಗಳೂರು ಮೂಲದ ಯುವತಿಯರಿಬ್ಬರು ಬಸ್ಸಿನ ಚಾಲಕನ ಬದಿಯ ಅಡ್ಡ ಸೀಟಿನಲ್ಲಿ ಕುಳಿತಿದ್ದರು. ಚಾಲಕನ ಹಿಂಭಾಗದ ಸೀಟಿನಲ್ಲಿ ಬೆಳ್ಳಾರೆ ನಿವಾಸಿ ಮುಸ್ಲಿಂ ಯುವಕನೋರ್ವ ಕುಳಿತಿದ್ದ. ಪ್ರಯಾಣದ ವೇಳೆ ಯುವತಿಯರಿಬ್ಬರ ಜೊತೆಗೆ ಯುವಕ ಮಾತುಕತೆ ನಡೆಸಿದ್ದ, ಮೊಬೈಲ್ ಸಂಖ್ಯೆ ಪಡೆದುಕೊಂಡು ಚಾಟಿಂಗ್ ನಡೆಸುತ್ತಿದ್ದರು ಎಂದು ಸಂಶಯ ವ್ಯಕ್ತಪಡಿಸಿ ಬಸ್ಸಲ್ಲಿ ಬೆಂಗಳೂರು ಕಡೆಗೆ ಪ್ರಯಾಣಿಸುತ್ತಿದ್ದ ಭಜರಂಗದಳದ ಕಾರ್ಯಕರ್ತರು ಆರೋಪಿಸಿ ಬಸ್ಸಲ್ಲೇ ಯುವಕನನ್ನು ತರಾಟೆಗೈದು ಆತನ ಮೊಬೈಲ್ ಕಿತ್ತುಕೊಂಡಿದ್ದಾರೆ.
ಪುತ್ತೂರಿನಿಂದ ಕುಂಬ್ರಕ್ಕೆ ಟಿಕೆಟ್ ಪಡೆದಿದ್ದ ಯುವಕ, ಕುಂಬ್ರದಲ್ಲಿ ಇಳಿಯದೇ ಬೆಂಗಳೂರಿಗೆ ಟಿಕೆಟ್ ಪಡೆದಿರುವ ವಿಚಾರದ ಕುರಿತು ಸಂಶಯ ವ್ಯಕ್ತಪಡಿಸಿದ್ದಾರೆ. ಈ ಕುರಿತು ಪುತ್ತೂರಿನ ಬಜರಂಗದಳ ಕಾರ್ಯಕರ್ತರು ಮಾಹಿತಿ ಪಡೆದು ಕಾರಲ್ಲಿ ಬಸ್ಸನ್ನು ಹಿಂಬಾಲಿಸಲು ಆರಂಭಿಸಿದ್ದರು. ಇದರಿಂದ ಗಾಬರಿಗೊಂಡ ಯುವಕ ಜಾಲ್ಸೂರು ಬಳಿ ಬಸ್ಸಿನಿಂದ ಇಳಿಯಲು ಯತ್ನಿಸಿದಾಗ ಭಜರಂಗದಳ ಕಾರ್ಯಕರ್ತರು ಆತನನ್ನು ಇಳಿಯದಂತೆ ತಡೆದು ಸುಳ್ಯ ಪೊಲೀಸ್ ಠಾಣೆಗೆ ಬರುವಂತೆ ಒತ್ತಾಯಿಸಿದ್ದರು. ವಿಚಾರ ತಿಳಿದು ಯುವಕನ ಪರವಾಗಿಯೂ ಗುಂಪೊಂದು ಜಮಾಯಿಸಿ ಮಾತಿನ ಚಕಮಕಿ ನಡೆದಿದೆ. ತಕ್ಷಣ ಮಾಹಿತಿ ಪಡೆದ ಸುಳ್ಯ ಠಾಣೆ ಪೊಲೀಸರು ಜಾಲ್ಸೂರು ಬಳಿ ಬಂದು ಬಜರಂಗದಳ ಕಾರ್ಯಕರ್ತರ ಸಹಿತ ಬಸ್ಸನ್ನು ಠಾಣೆಗೆ ಕರೆ ತಂದಿದ್ದಾರೆ.
ಠಾಣೆ ಮುಂಭಾಗದಲ್ಲಿ ಸುಮಾರು 50-60 ಮಂದಿ ಬಜರಂಗದಳ ಕಾರ್ಯಕರ್ತರು ಜಮಾಯಿಸಿ ಪೊಲೀಸರ ಜೊತೆಗೆ ಮಾತಿನ ಚಕಮಕಿ ನಡೆದಿದೆ. ಯುವಕನ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ. ಆದರೆ ಯುವತಿಯರ ಹಾಗೂ ಯುವಕನ ಮೊಬೈಲ್ ಗಳನ್ನು ಪೊಲೀಸರು ಪರಿಶೀಲಿಸಿದಾಗ ಬಜರಂಗದಳ ಕಾರ್ಯಕರ್ತರು ಆರೋಪಿಸಿದ ರೀತಿಯಲ್ಲಿ ಯಾವುದೇ ಸಾಕ್ಷ್ಯಗಳು ಲಭ್ಯವಾಗದ ಹಿನ್ನೆಲೆಯಲ್ಲಿ ಪ್ರಕರಣವನ್ನು ಅಲ್ಲಿಗೇ ಇತ್ಯರ್ಥಗೊಳಿಸಲಾಯ್ತು.
Kshetra Samachara
21/08/2021 11:29 am