ಸುಳ್ಳು: ಕೊರೊನಾ ಸೋಂಕಿತ ದಂಪತಿಯು ವೃದ್ಧ ತಾಯಿಯನ್ನು ಮನೆಯೊಳಗೆ ಕೂಡಿ ಹಾಕಿ ನಾಪತ್ತೆಯಾಗಿರುವ ಘಟನೆ ಸುಳ್ಯದಲ್ಲಿ ನಡೆದಿದೆ.
ಸುಳ್ಯದ ಆಸುಪಾಸಿನಲ್ಲಿ ಬಳೆ ಮಾರಿ ಜೀವನ ಸಾಗಿಸುತ್ತಿದ್ದ ರಾಜೇಶ್ವರಿ ಎಂಬವರು ತನ್ನ ಗಂಡ ವಿನಯಕುಮಾರ್ ಹಾಗೂ ವೃದ್ಧ ತಾಯಿಯ ಜತೆ ಗಾಂಧಿನಗರ ಸಂತೋಷ್ ಚಿತ್ರಮಂದಿರದ ಎದುರಿನ ಬಿಲ್ಡಿಂಗ್‌ನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ರಾಜೇಶ್ವರಿ ಮತ್ತು ವಿನಯ ಕುಮಾರ್ ಅವರಿಗೆ ಕಳೆದ ವಾರ ಕೊರೊನಾ ಪರೀಕ್ಷೆ ನಡೆಸಿದಾಗ ಅದರ ವರದಿ ಪಾಸಿಟಿವ್ ಬಂದಿತ್ತು. ಈ ವಿಷಯ ಅರಿತ ಆ ದಂಪತಿ ಶನಿವಾರ ತಾವಿದ್ದ ಕೊಠಡಿಗೆ ಹೊರಗಿನಿಂದ ಬೀಗ ಹಾಕಿ ಬೇರೆ ಕಡೆಗೆ ತೆರಳಿದ್ದಾರೆ.
ದಿನದ ವರದಿ ಪಡೆಯುವ ಸಲುವಾಗಿ ಆರೋಗ್ಯ ಇಲಾಖೆಯವರು ಫೋನ್ ಮಾಡಿದಾಗ ದಂಪತಿ ಫೋನ್ ಕರೆ ಸ್ವೀಕರಿಸಿಲ್ಲ. ಆರೋಗ್ಯ ಇಲಾಖೆಯವರು ಅವರು ನೀಡಿದ ವಿಳಾಸವನ್ನು ಹುಡುಕಿಕೊಂಡು ಬಂದಾಗ ಮನೆಗೆ ಬೀಗ ಹಾಕಲಾಗಿತ್ತು. ಇಂದು ಬೆಳಗ್ಗೆ ಮನೆಯೊಳಗಿದ್ದ ವೃದ್ಧೆಯೊಬ್ಬರು ಬೊಬ್ಬಿಡುತ್ತಿರುವುದನ್ನು ಕಂಡ ಸ್ಥಳೀಯರು ಪೋಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರ ನೇತೃತ್ವದಲ್ಲಿ ಆರೋಗ್ಯ ಇಲಾಖೆ ಹಾಗೂ ಸ್ಥಳೀಯರು ಬಾಗಿಲು ತೆರೆದು ವೃದ್ಧೆಯನ್ನು ವಿಚಾರಿಸಿದಾಗ ಮೂರು ದಿನಗಳಿಂದ ವೃದ್ಧೆ ಉಪವಾಸದಲ್ಲಿದ್ದ ವಿಚಾರ ತಿಳಿದಿದೆ. ತಕ್ಷಣವೇ ವೃದ್ಧೆಗೆ ಆಹಾರದ ವ್ಯವಸ್ಥೆ ಮಾಡಲಾಯಿತು.
ತಾಲೂಕು ಆರೋಗ್ಯಾಧಿಕಾರಿಯ ಡಾ.ನಂದಕುಮಾರ್ ಅವರ ನೇತೃತ್ವದಲ್ಲಿ ವೃದ್ಧೆಯ ಆರೋಗ್ಯ ತಪಾಸಣೆ ನಡೆಸಲಾಗಿದ್ದು, ವೃದ್ಧೆಗೂ ಕೊರೊನಾ ಪಾಸಿಟಿವ್ ವರದಿ ಬಂದಿದೆ ಎನ್ನಲಾಗಿದೆ. ನಂತರದಲ್ಲಿ ಅಧಿಕಾರಿಗಳು ವೃದ್ಧೆಯ ಮಕ್ಕಳನ್ನು ಕರೆಸಿದ್ದು, ಇವರು ಆಸ್ಪತ್ರೆಗೆ ಹೋಗದೆ ತಾಲೂಕು ಕಚೇರಿಯ ಮುಂದೆ ಕುಳಿತು ಪ್ರತಿಭಟಿಸಿದ ಘಟನೆಯೂ ನಡೆದಿದೆ ಎನ್ನಲಾಗಿದೆ.
ನಂತರದಲ್ಲಿ ಮನವೊಲಿಸಿದ ಅಧಿಕಾರಿಗಳು ಸುಳ್ಯದ ಅರಂತೋಡಿನಲ್ಲಿರುವ ಮಗನ ಮನೆಗೆ ವೃದ್ಧೆ ಹಾಗೂ ಮಗಳನ್ನು ಕಳುಹಿಸಿದ್ದು, ಆದರೆ ಅವರು ಅಲ್ಲಿಗೂ ಹೋಗದೇ ಸ್ಥಳೀಯ ಕಟ್ಟಡವೊಂದರಲ್ಲಿ ತಂಗಿದ್ದಾರೆ ಎನ್ನಲಾಗಿದೆ. ಇದೀಗ ಆರೋಗ್ಯ ಅಧಿಕಾರಿಗಳು ಈ ಸ್ಥಳಕ್ಕೆ ತೆರಳಿ ಇವರನ್ನು ತಾಲೂಕು ಆಸ್ಪತ್ರೆಗೆ ಸ್ಥಳಾಂತರಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
Kshetra Samachara
11/08/2021 11:03 am