ಮುಲ್ಕಿ: ಪಡುಪಣಂಬೂರು ಗ್ರಾಮಪಂಚಾಯತ್ ವ್ಯಾಪ್ತಿಯ 10ನೇ ತೋಕೂರು ಕಂಬಳಬೆಟ್ಟು(ಪುನರೂರು ರಾಜ್ಯಹೆದ್ದಾರಿ) ಬಳಿ ರಾಜ್ಯ ಹೆದ್ದಾರಿಗೆ ತಾಗಿಕೊಂಡು ಇರುವ ಸರಕಾರಿ ಸ್ಥಳವನ್ನು ಸ್ಥಳೀಯ ವ್ಯಕ್ತಿಯೊಬ್ಬರು ತಡೆಗೋಡೆ ನಿರ್ಮಾಣ ಮಾಡಿ ಅಕ್ರಮ ರಸ್ತೆ ಕಾಮಗಾರಿ ನಡೆಸಿದ್ದು ಸ್ಥಳೀಯರು ತನಿಖೆಗೆ ಆಗ್ರಹಿಸಿದ್ದಾರೆ.
ಪಡುಪಣಂಬೂರು ಗ್ರಾಪಂ 10ನೇ ತೋಕೂರು ಕಂಬಳಬೆಟ್ಟು ಬಳಿ ಕಳೆದ ಹಲವಾರು ವರ್ಷಗಳಿಂದ ಅಂಗನವಾಡಿಗೆ ಸರಕಾರಿ ಸ್ಥಳವನ್ನು ಮೀಸಲಿಟ್ಟಿದ್ದು ರಾಜಕೀಯ ಕೃಪಾಕಟಾಕ್ಷದಿಂದ ಎತ್ತಂಗಡಿಮಾಡಿ ಸ್ಥಳೀಯ ವ್ಯಕ್ತಿಯೊಬ್ಬರ ಖಾಸಗಿ ಜಾಗಕ್ಕೆ ರಸ್ತೆ ನಿರ್ಮಾಣ ಕಾರ್ಯ ನಡೆಯುತ್ತಿದೆ.
ಅಕ್ರಮ ಕಾಮಗಾರಿ ನಡೆಯುತ್ತಿರುವ ಜಾಗಕ್ಕೆ ತಾಗಿಕೊಂಡೇ ಸ್ಥಳೀಯ ವ್ಯಕ್ತಿಯೊಬ್ಬರ ಮನೆಗೆ ಹೋಗುವ ದಾರಿ ಬದಿಯ ಸರಕಾರಿ ಜಾಗದಲ್ಲಿ ಪಂಚಾಯತ್ ಆಡಳಿತ ನೀರಿನ ಟ್ಯಾಂಕಿ ನಿರ್ಮಾಣ ಮಾಡಲು, ಅನೇಕ ವರ್ಷಗಳ ಹಿಂದಿನ ನಾಗನಕಟ್ಟೆ ತೆರವುಗೊಳಿಸಲು ಮುಂದಾಗಿದ್ದು ಈ ಬಗ್ಗೆ ದೂರು ನೀಡಿದರೂ ಪಂಚಾಯತ್ ಅಧಿಕಾರಿಗಳು ಮೌನ ವಹಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಪಂಚಾಯತ್ ಅಧಿಕಾರಿಗಳು ಒಂದು ಕಣ್ಣಿಗೆ ಬೆಣ್ಣೆ ಒಂದು ಕಣ್ಣಿಗೆ ಸುಣ್ಣ ಎಂಬ ನೀತಿ ಅನುಸರಿಸುತ್ತಿದ್ದು ಈ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಸರಕಾರಿ ಜಾಗದಲ್ಲಿ ಅಕ್ರಮ ರಸ್ತೆ, ತಡೆಗೋಡೆ ನಿರ್ಮಾಣದ ಹಿಂದೆ ಲಕ್ಷಾಂತರ ರೂ ಅವ್ಯವಹಾರ ನಡೆದಿರುವ ಬಗ್ಗೆ ಶಂಕೆ ವ್ಯಕ್ತವಾಗಿದ್ದು ತನಿಖೆಗೆ ಸ್ಥಳೀಯರು ಒತ್ತಾಯಿಸಿದ್ದಾರೆ.
Kshetra Samachara
28/07/2021 05:48 pm