ಉಡುಪಿ: ಮಣಿಪಾಲದ ಕೆ.ಎಫ್‌ಸಿ ಹೋಟೆಲ್ ಬಳಿ ಇತ್ತೀಚೆಗೆ ರಾತ್ರಿ ವೇಳೆ ನಡೆದುಕೊಂಡು ಬರುತ್ತಿದ್ದ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯನ್ನು ಕಾರ್‌ನಲ್ಲಿ ಅಡ್ಡಗಟ್ಟಿ ಚಾಕು ತೋರಿಸಿ ಬೆದರಿಸಿ ಮೊಬೈಲ್, ವಾಚ್, ಹಣ ಸುಲಿಗೆ ಮಾಡಿದ ಆರೋಪಿಗಳನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ.
ಈ ಘಟನೆ ಮಣಿಪಾಲದ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಆತಂಕಕ್ಕೆ ಕಾರಣವಾಗಿತ್ತು.
ದಿನಾಂಕ 31.01.2021 ರಂದು ರಾತ್ರಿ ಸುಮಾರು 12:15 ಗಂಟೆ ಸಮಯದಲ್ಲಿ ಮಣಿಪಾಲದ ಕೆ.ಎಫ್.ಸಿ. ಬಿಲ್ಡಿಂಗ್ ಬಳಿ ಕುಳಿತು ಮಾತನಾಡುತ್ತಿದ್ದ ವಿದ್ಯಾರ್ಥಿ- ವಿದ್ಯಾರ್ಥಿನಿಯನ್ನು ನೋಡಿದ ಮೂವರು ಆರೋಪಿಗಳು ದೂರದಲ್ಲಿ ಕಾರ್ ನಿಲ್ಲಿಸಿ ಸಿಗರೇಟ್ ಕೇಳುವ ನೆಪದಲ್ಲಿ ವಿದ್ಯಾರ್ಥಿನಿಯ ಬಳಿ ಬಂದು ಅವಳ ಕುತ್ತಿಗೆಗೆ ಚಾಕು ಹಿಡಿದು ಬೆದರಿಸಿ ಅವರ ಬಳಿಯಿದ್ದ 2 ಮೊಬೈಲ್ ಗಳು 250 ರೂ. ಹಾಗೂ ಇಯರ್ ಫೋನ್ ಸುಲಿಗೆ ಮಾಡಿ ಪರಾರಿಯಾಗಿದ್ದರು.
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಉಡುಪಿ ಎಸ್‌ಪಿ ಎನ್.ವಿಷ್ಣುವರ್ಧನ್, ಆರೋಪಿಗಳ ಪತ್ತೆಗೆ ಅಡಿಷನಲ್ ಎಸ್‌ಪಿ ಕುಮಾರಚಂದ್ರ ಮತ್ತು ಡಿವೈಎಸ್‌ಪಿ ಸುಧಾಕರ ನಾಯಕ್ ಮೇಲುಸ್ತುವಾರಿಯಲ್ಲಿ ಆರೋಪಿಗಳನ್ನು ಪತ್ತೆ ಮಾಡಲು ಮಣಿಪಾಲ ಪೊಲೀಸ್ ನಿರೀಕ್ಷಕರಾದ ಮಂಜುನಾಥ್ ನಾಯಕತ್ವದಲ್ಲಿ ತಂಡವನ್ನು ರಚಿಸಿದ್ದರು.
ತನಿಖಾ ತಂಡದ ಸದಸ್ಯರಾದ ಪಿಎಸ್‌ಐ ರಾಜ್‌ಶೇಖರ ವಂದಲಿ, ಪಿಎಸ್‌ಐ ನಿರಂಜನ್ ಗೌಡ ಮತ್ತು ದೇವರಾಜ ಬಿರಾದಾರ, ಎಎಸ್‌ಐ ಶೈಲೇಶ್‌ಕುಮಾರ್ , ಹೆಚ್ ಸಿ ಮಹೇಶ್ , ಅಬ್ದುಲ್ ರಜಾಕ್, ಥಾಮ್ಸನ್, ಪ್ರಸನ್ನ , ವಿಶ್ವಜಿತ್ , ಪಿಸಿ ಮೊಹಮ್ಮದ್ ರಫೀಕ್, ಆದರ್ಶ ನಾಯ್ಕ ಹಾಗೂ ಸಿಡಿಆರ್ ಘಟಕದ ದಿನೇಶ್ ಅವರು ಮುಂಬೈ, ಥಾಣೆ, ಬೆಂಗಳೂರು, ಶಿವಮೊಗ್ಗಗಳಲ್ಲಿ ತಿರುಗಾಡಿ ಆರೋಪಿಗಳಾದ ಶಿವಮೊಗ್ಗದ ಆಸೀಫ್ ಮತ್ತು ದಸ್ತಗೀರ್ ಬೇಗ್ ಎಂಬವರನ್ನು ಬಂಧಿಸಿ ಕೃತ್ಯಕ್ಕೆ ಬಳಸಿದ ಕಾರು, 2 ಮೊಬೈಲ್ ಮತ್ತು ಚಾಕು ವಶಪಡಿಸಿದ್ದಾರೆ. ಇನ್ನೊಬ್ಬ ಆರೋಪಿ ತಲೆಮರೆಸಿಕೊಂಡಿದ್ದು, ಪತ್ತೆ ಕಾರ್ಯ ಮುಂದುವರಿದಿದೆ.
Kshetra Samachara
07/02/2021 05:05 pm