ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಂಟ್ವಾಳ: 'ಬೈಕ್ ನಲ್ಲಿ ಬಂದು ಸರ ಎಗರಿಸಿದರು'; ಚಾಲಾಕಿ ಅಜ್ಜಿ ಪೊಲೀಸರನ್ನೇ ಬೇಸ್ತು ಬೀಳಿಸಿದ್ದು ಹೀಗೆ..!

ಬಂಟ್ವಾಳ: 'ಬೈಕ್ ನಲ್ಲಿ ಬಂದ ಖದೀಮರು ಚಿನ್ನದ ಸರ ಎಳೆದು ಪರಾರಿಯಾಗಿದ್ದಾರೆ' ಎಂದು ನಂಬಿಸಲು ಹೊರಟ ವೃದ್ಧೆಯೊಬ್ಬರ ಅಭಿನಯ ಪ್ರಸಂಗ ಬಯಲಾದ ಘಟನೆ ಬಂಟ್ವಾಳದಲ್ಲಿ ನಡೆದಿದೆ.

ಬಂಟ್ವಾಳ ಪುರಸಭೆ ವ್ಯಾಪ್ತಿಯ ಜಕ್ರಿಬೆಟ್ಟು ನಿವಾಸಿ ಮಹಿಳೆಯೊಬ್ಬರು ಜ. 8ರಂದು ಪೇಟೆಗೆ ಬಂದು ವಾಪಸ್ ಮನೆಗೆ ತೆರಳುವ ವೇಳೆ ಮನೆ ಪಕ್ಕದಲ್ಲಿ ಬೈಕಿನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಕುತ್ತಿಗೆಯಲ್ಲಿದ್ದ ಮೂರು ಪವನ್ ಚಿನ್ನದ ಸರವನ್ನು ಎಳೆದು ಪರಾರಿಯಾಗಿದ್ದಾಗಿ ದೂರಿದ್ದರು. ಈ ವೇಳೆ ಅಜ್ಜಿಯ ಬೆನ್ನಿಗೆ ಗಾಯಗಳಾಗಿದ್ದಾಗಿ ಹೇಳಲಾಗಿತ್ತು. ಚಿನ್ನದ ಸರವನ್ನು ಕಳೆದುಕೊಂಡಿದ್ದಾಗಿ ಹೇಳಿದ ಅಜ್ಜಿ, ನೇರವಾಗಿ ಮನೆಗೆ ಹೋಗಿ, ಮಗಳು ಮಂಗಳೂರಿನಿಂದ ಕೆಲಸ ಮುಗಿಸಿ ಬಂದಾಗ ವಿಚಾರ ತಿಳಿಸಿದ್ದಾರೆ. ಈ ಸಂಬಂಧ ಮಗಳು, ಬಂಟ್ವಾಳ ನಗರ ಪೊಲೀಸ್ ಠಾಣೆಗೆ ಕರೆದುಕೊಂಡು ಬಂದು ಘಟನೆ ವಿವರಿಸಿ, ಪ್ರಕರಣ ದಾಖಲು ಮಾಡುತ್ತಾರೆ.

ಇದನ್ನು ಗಂಭೀರ ಪ್ರಕರಣವೆಂದು ಪರಿಗಣಿಸಿ ತನಿಖೆ ಮಾಡಲು ಹೊರಟ ಬಂಟ್ವಾಳ ವೃತ್ತ ನಿರೀಕ್ಷಕ ಟಿ.ಡಿ.ನಾಗರಾಜ್, ನಗರ ಠಾಣೆ ಎಸ್.ಐ. ಹಾಗೂ ಅಪರಾಧ ವಿಭಾಗ ಎಸ್.ಐ. ಕಲೈಮಾರ್ ನೇತೃತ್ವದಲ್ಲಿ ತಂಡ ರಚನೆ ಮಾಡಿ ಪ್ರಕರಣದ ಕುರಿತು ಮಾಹಿತಿ ಕಲೆ ಹಾಕಲು ಶುರು ಮಾಡುತ್ತಾರೆ. ಸಿ.ಸಿ. ಕ್ಯಾಮೆರಾ ಫುಟೇಜ್ ಪರಿಶೀಲನೆ ನಡೆಸಲಾಗುತ್ತದೆ. ಆದರೆ, ಆ ದಿನ ಅಜ್ಜಿ ಮನೆಯ ರಸ್ತೆಯಲ್ಲಿ ಅಂಥ ಯಾವುದೇ ಘಟನೆ ನಡೆದ ಕುರಿತು ಸುಳಿವು ಪೊಲೀಸ್ ತಂಡಕ್ಕೆ ದೊರಕುವುದಿಲ್ಲ. ಈ ಹಿನ್ನೆಲೆಯಲ್ಲಿ ಅಜ್ಜಿಯ ವಿಚಾರಣೆಗೆ ಪೊಲೀಸರು ಮುಂದಾಗುತ್ತಾರೆ. ಈ ವೇಳೆ ಅಜ್ಜಿ ತಪ್ಪೊಪ್ಪಿಕೊಳ್ಳುತ್ತಾರೆ.

ನಡೆದದ್ದೇನು: ಅಜ್ಜಿಯ ಕುತ್ತಿಗೆಯಲ್ಲಿದ್ದ ಚಿನ್ನದ ಚೈನ್ ಒಂದನ್ನು ಯಾವುದೋ ಉದ್ದೇಶದಿಂದ ಸಂಬಂಧಿಕರಿಗೆ ನೀಡಿದ್ದರು. ಬಳಿಕ ಮಗಳು ಬೈಯುತ್ತಾಳೆ ಎಂಬ ಕಾರಣಕ್ಕಾಗಿ ಬೆನ್ನಿಗೆ ಪರಚಿದ ರೀತಿಯಲ್ಲಿ ಗಾಯ ಮಾಡಿಕೊಂಡು ರಾಬರಿ ಮಾಡಿದ್ದಾರೆ ಎಂಬ ನಾಟಕವಾಡಿದ್ದರು. ಈ ರೀತಿ ಪೊಲೀಸರನ್ನೇ ಬೇಸ್ತು ಬೀಳಿಸಿದ ಚಾಲಾಕಿ ಅಜ್ಜಿಯ ವಿರುದ್ಧ ಪ್ರಕರಣ ದಾಖಲಿಸಲು ಸರ್ಕಲ್ ಇನ್ಸ್ ಪೆಕ್ಟರ್ ನ್ಯಾಯಾಲಯಕ್ಕೆ ಪತ್ರ ಬರೆದಿದ್ದಾರೆ.

Edited By : Nagaraj Tulugeri
Kshetra Samachara

Kshetra Samachara

16/01/2021 10:50 am

Cinque Terre

25.86 K

Cinque Terre

1