ಮಂಗಳೂರು: ನಗರದ ಸುರತ್ಕಲ್ ಸಮೀಪದ ಇಡ್ಯಾ ಎಂಬಲ್ಲಿ ಫೈನಾನ್ಸ್ ಮೂಲಕ ಚಿಟ್‌ಫಂಡ್ ವ್ಯವಹಾರ ನಡೆಸುತ್ತಿದ್ದ ಮೂವರು ತನಗೆ 10 ಲಕ್ಷ ರೂ.ವನ್ನು ನೀಡದೆ ವಂಚಿಸಿದ್ದಾರೆ ಎಂದು ವ್ಯಕ್ತಿಯೊಬ್ಬರು ಮಂಗಳೂರಿನ ಸೆನ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಚಿಟ್‌ಫಂಡ್ ವ್ಯವಹಾರ ನಡೆಸುತ್ತಿದ್ದ ಅಶೋಕ್ ಭಟ್ , ವಿದ್ಯಾ ಹಾಗೂ ಪ್ರಿಯಾಂಕ ಭಟ್ ಎಂಬವರ ಮೇಲೆ ದೂರು ದಾಖಲಾಗಿದೆ.
ಆರೋಪಿಗಳ ಫೈನಾನ್ಸ್‌ನ 10 ಲಕ್ಷ ರೂ. ಮೌಲ್ಯದ ಚಿಟ್‌ಫಂಡ್‌ಗೆ ತಾನು ಸೇರಿದ್ದೆ. 2019ರ ಸೆಪ್ಟೆಂಬರ್‌ನಿಂದ ಪ್ರತೀ ತಿಂಗಳು 50 ಸಾವಿರ ರೂ. ಚಿಟ್‌ಫಂಡ್‌ಗೆ ಪಾವತಿಸಲು ತಿಳಿಸಿದ್ದರು. ಅದರಂತೆ ಆರೋಪಿಗಳು ಪ್ರತಿದಿನ 1,500 ರೂ.ವನ್ನು ತನ್ನಿಂದ ಪಡೆದುಕೊಂಡು ಹೋಗುತ್ತಿದ್ದರು. ತಿಂಗಳಿಗೊಮ್ಮೆ ಕಚೇರಿಗೆ ಹೋಗಿ ವ್ಯವಹಾರದ ಪಾಸ್ ಪುಸ್ತಕದಲ್ಲಿ ಹಣ ಕಟ್ಟಿರುವ ಬಗ್ಗೆ ನಮೂದಿಸಿ ಸಹಿ ಪಡೆದುಕೊಂಡು ಬರುತ್ತಿದ್ದೆ.
2021 ರ ಮಾರ್ಚ್ 28 ರಂದು ಚಿಟ್ ಫಂಡ್ ಮುಕ್ತಾಯವಾಗಿದ್ದು, ನಂತರದ ದಿನಗಳಲ್ಲಿ ಹಣ ಪಾವತಿಸುವುದಾಗಿ ಫೈನಾನ್ಸ್ ಮಾಲಕರು ತಿಳಿಸಿದ್ದರು. ಆದರೆ ಈವರೆಗೆ ಹಣ ಕೊಡದೆ ತಪ್ಪಿಸಿಕೊಳ್ಳುತ್ತಿದ್ದಾರೆ. ನನಗೆ ಮಾತ್ರವಲ್ಲದೆ ಇತರರಿಗೂ ಸಹಿತ ಸುಮಾರು 2 ಕೋ. ರೂ.ನಷ್ಟು ಹಣ ನೀಡದೆ ವಂಚಿಸಿದ್ದಾರೆ ಎಂದು ದೂರಿನಲ್ಲಿ ವಿವರಿಸಿದ್ದಾರೆ.
Kshetra Samachara
27/09/2022 12:21 pm