ಮಂಗಳೂರು: ಕರ್ತವ್ಯದಲ್ಲಿದ್ದಾಗಲೇ ಕೌಂಟರ್ ವೇಟ್ ಬಡಿದು ಮೃತಪಟ್ಟ ಗುತ್ತಿಗೆ ಕಾರ್ಮಿಕ ಕೇಶವ ಕೋಟ್ಯಾನ್ ಕುಟುಂಬಕ್ಕೆ ಎಂಆರ್ ಪಿಎಲ್ ಸಂಸ್ಥೆ 1 ಕೋಟಿ ರೂ. ಪರಿಹಾರ ನೀಡಬೇಕು. ಜೊತೆಗೆ ಅವರ ಕುಟುಂಬ ಸದಸ್ಯರೋರ್ವರಿಗೆ ಎಂಆರ್ ಪಿಎಲ್ ನಲ್ಲಿ ಖಾಯಂ ಉದ್ಯೋಗ ಕೊಡಬೇಕೆಂದು ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಆಗ್ರಹಿಸಿದ್ದಾರೆ.
ಕರ್ತವ್ಯದಲ್ಲಿದ್ದಾಗಲೇ ಕೇಶವ ಕೋಟ್ಯಾನ್ ಮೃತಪಟ್ಟಿದ್ದರೂ, ಸಾವಿನ ನೈಜ ಕಾರಣವನ್ನು ಕಂಪೆನಿ ಮುಚ್ಚಿಟ್ಟು ಸ್ವಾಭಾವಿಕ ಸಾವು ಎಂಬಂತೆ ಬಿಂಬಿಸುತ್ತಿದೆ. ಅಲ್ಲದೆ ಗುತ್ತಿಗೆ ಆಧಾರದಲ್ಲಿ ಅವರು ಕರ್ತವ್ಯ ಮಾಡುತ್ತಿರುವುದರಿಂದ ಸಂಸ್ಥೆಗೂ ಅವರಿಗೂ ಸಂಬಂಧ ಇಲ್ಲದಂತೆ ವರ್ತಿಸುತ್ತಿದೆ. ಆದ್ದರಿಂದ ಸಾವಿನ ತನಿಖೆಯಾಗಿ ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ. ಖಾಯಂ ನೌಕರ ಮೃತಪಟ್ಟರೆ ಎಂಆರ್ ಪಿಎಲ್ ಸಂಸ್ಥೆ 2.25 ಕೋಟಿ ರೂ. ಕೊಡುತ್ತದೆ. ಆದರೆ ಗುತ್ತಿಗೆ ಕಾರ್ಮಿಕ ಕೇಶವ ಕೋಟ್ಯಾನ್ ರಿಗೆ 25 ಲಕ್ಷ ರೂ. ಕೊಡಲಾಗುತ್ತಿದೆ.ಇದು ಸರಿಯಲ್ಲ. ಆದ್ದರಿಂದ ಕಂಪೆನಿ ಕೇಶವ ಕೋಟ್ಯಾನ್ ಕುಟುಂಬಕ್ಕೆ 1 ಕೋಟಿ ರೂ. ಪರಿಹಾರ ನೀಡಬೇಕು. ಜೊತೆಗೆ ಅವರ ಪುತ್ರನಿಗೆ ಖಾಯಂ ಉದ್ಯೋಗ ನೀಡಬೇಕೆಂದು ಮುನೀರ್ ಕಾಟಿಪಳ್ಳ ಆಗ್ರಹಿಸಿದರು.
ಏನಿದು ಪ್ರಕರಣ?: ಎಂಆರ್ ಪಿಎಲ್ ಸಂಸ್ಥೆಯಲ್ಲಿ ಕೇಶವ ಕೋಟ್ಯಾನ್ (47) ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದರು. ಇವರು ಜೂ.22ರಂದು ವರ್ಕ್ ಶಾಪ್ ನಲ್ಲಿ ಕ್ರೇನ್ ಮೂಲಕ ಕೌಂಟರ್ ವೇಟ್ ಅನ್ನು ಅನ್ ಲೋಡ್ ಮಾಡುತ್ತಿದ್ದರು. ಈ ಸಂದರ್ಭ ಕೌಂಟರ್ ವೇಟ್ ಬಡಿದು ಕೇಶವ ಕೋಟ್ಯಾನ್ ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ, ದಾರಿ ಮಧ್ಯೆ ಅವರು ಮೃತಪಟ್ಟಿದ್ದರು. ಈ ಬಗ್ಗೆ ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
24/06/2022 04:51 pm