ಮಂಗಳೂರು: ನಗರದ ಕೊಣಾಜೆ ಮೂಲದ ವಿವಾಹಿತ ಅನ್ಯಕೋಮಿನ ಯುವಕನೋರ್ವನು ಮೈಸೂರು ಮೂಲದ ವಿದ್ಯಾರ್ಥಿನಿಯನ್ನು ಲೈಂಗಿಕವಾಗಿ ದುರ್ಬಳಕೆ ಮಾಡಿ ಹಣ ವಂಚನೆ ಮಾಡಿರುವ ಆರೋಪದ ಮೇಲೆ ಮಂಗಳೂರಿನ ಪಾಂಡೇಶ್ವರದ ಮಹಿಳಾ ಪೊಲೀಸ್ ಠಾಣೆಯಲ್ಲಿ ನಿನ್ನೆ ದೂರು ದಾಖಲಾಗಿತ್ತು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತಕ್ಷಣ ಕ್ರಮ ಕೈಗೊಂಡು ಆರೋಪಿಯನ್ನು ಇಂದು ಬೆಂಗಳೂರಿನಲ್ಲಿ ವಶಕ್ಕೆ ಪಡೆದುಕೊಂಡಿದ್ದಾರೆ.
ಸಂತ್ರಸ್ತ ವಿದ್ಯಾರ್ಥಿನಿ ಸೆ.21ರಂದು ಆರೋಪಿಯನ್ನು ಹುಡುಕಿಕೊಂಡು ಕೊಣಾಜೆಯಲ್ಲಿರುವ ಆತನ ಮನೆಗೆ ಹೋಗಿದ್ದಾಳೆ. ಆದರೆ ಮನೆಯವರು ಆಕೆಯ ಮೇಲೆ ಹಲ್ಲೆ ನಡೆಸಿ ಮನೆಯಿಂದ ಹೊರಗೆ ಹಾಕಿದ್ದಾರೆ. ಆಕೆ ಮರಳಿ ಮೈಸೂರಿಗೆ ಹೋಗಲು ಬಸ್ ನಿಲ್ದಾಣದಲ್ಲಿ ಅಳುತ್ತಾ ಇದ್ದಾಗ. ಸಾರ್ವಜನಿಕರು ಪೊಲೀಸರಿಗೆ ತಿಳಿಸಿದ್ದಾರೆ. ತಕ್ಷಣ ಅಲ್ಲಿಗೆ ಕೊಣಾಜೆ ಪೊಲೀಸರು ಆಗಮಿಸಿ ಆಕೆಯನ್ನು ಠಾಣೆಗೆ ಕರೆದೊಯ್ದು, ಸಾಂತ್ವನ ತಿಳಿಸಿದ್ದಾರೆ. ಈ ಸಂದರ್ಭ ಆಕೆ ತನ್ನ ವಕೀಲರ ಮೂಲಕ ಮೈಸೂರಿನಲ್ಲಿಯೇ ಈ ಬಗ್ಗೆ ದೂರು ದಾಖಲಿಸುವುದಾಗಿ ತಿಳಿಸಿದ್ದಾಳೆ. ಅದರಂತೆ ಪೊಲೀಸರೇ ತಮ್ಮ ವಾಹನದಲ್ಲಿ ಬಸ್ ನಿಲ್ದಾಣದವರೆಗೆ ಆಕೆಯನ್ನು ಕರೆದೊಯ್ದು ಬಸ್ ಟಿಕೆಟ್ ತೆಗೆದುಕೊಟ್ಟು ಮೈಸೂರಿಗೆ ಕಳುಹಿಸಿದ್ದಾರೆ.
ಈ ಬಗ್ಗೆ ಮಂಗಳೂರು ಪೊಲೀಸ್ ಆಯುಕ್ತ ಶಶಿಕುಮಾರ್ ಎನ್. ಮಾತನಾಡಿ, ಸಂತ್ರಸ್ತ ವಿದ್ಯಾರ್ಥಿನಿ ನಿನ್ನೆ ಮತ್ತೆ ತಮ್ಮ ವಕೀಲರೊಂದಿಗೆ ಆಗಮಿಸಿ ಮಂಗಳೂರಿನಲ್ಲಿಯೇ ದೂರು ದಾಖಲಿಸುವುದಾಗಿ ತಿಳಿಸಿದ್ದಾಳೆ. ಆದ್ದರಿಂದ ಪಾಂಡೇಶ್ವರದಲ್ಲಿರುವ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ಆರೋಪಿಯ ಪತ್ತೆಗೆ ಕ್ರಮ ಕೈಗೊಳ್ಳಲಾಗಿದ್ದು, ಇಂದು ಮಧ್ಯಾಹ್ನ ಬೆಂಗಳೂರಿನಲ್ಲಿ ಆರೋಪಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು.
Kshetra Samachara
23/09/2021 04:52 pm