ಮಂಗಳೂರು: ನಗರದಲ್ಲಿ ಖಾಸಗಿ ಬಸ್ ಸಂಚಾರದ ವೇಳೆ ಯುವತಿಯೋರ್ವಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಿಗೆ ಸುದ್ದಿಗೋಷ್ಠಿ ವೇಳೆ ಪೊಲೀಸರ ಸಮ್ಮುಖದಲ್ಲಿಯೇ ಸಂತ್ರಸ್ತ ಯುವತಿ ನಡೆಸಿರುವ ಕಪಾಳಮೋಕ್ಷ ಪ್ರಕರಣಕ್ಕೆ ಸಂಬಂಧಿಸಿ ಸಾಮಾಜಿಕ ಕಾರ್ಯಕರ್ತರೊಬ್ಬರು ಮಾನವಹಕ್ಕು ಉಲ್ಲಂಘನೆಯಾಗಿದೆ ಎಂದು ನ್ಯಾಯಾಲಯಕ್ಕೆ ದೂರು ನೀಡಿದ್ದಾರೆ.
ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಸಹಿತ ಇನ್ನಿತರ ಪೊಲೀಸ್ ಅಧಿಕಾರಿಗಳು ಇರುವಾಗಲೇ ಆರೋಪಿಗೆ ಕಪಾಳಮೋಕ್ಷ ನಡೆದಿರುವುದು ಮಾನವ ಹಕ್ಕುಗಳ ಉಲ್ಲಂಘನೆ ಎಂದು ಮಂಗಳೂರು ಸುರತ್ಕಲ್ನ ಜೋಹನ್ ಸಿಕ್ವೇರ ಎಂಬವರು ದ.ಕ. ಜಿಲ್ಲಾ ನ್ಯಾಯಾಧೀಶರಿಗೆ ಇ-ಮೇಲ್ ಮೂಲಕ ದೂರು ಸಲ್ಲಿಸಿದ್ದಾರೆ. ಈ ಮೂಲಕ ನ್ಯಾಯಾಲಯ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಅವರು ದೂರಿನಲ್ಲಿ ಆಗ್ರಹಿಸಿದ್ದಾರೆ.
ಪ್ರಕರಣದ ಹಿನ್ನೆಲೆ: ಮಂಗಳೂರಿನ ಖಾಸಗಿ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಯುವತಿಯೋರ್ವಳು ತನ್ನ ಪಕ್ಕದಲ್ಲಿ ಕುಳಿತಿದ್ದ ಅಪರಿಚಿತ ವ್ಯಕ್ತಿಯೊಬ್ಬ ತನಗೆ ಲೈಂಗಿಕ ಕಿರುಕುಳ ನೀಡಿದ್ದರ ಬಗ್ಗೆ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕೇರಳದ ಹುಸೈನ್ ಎಂಬಾತನನ್ನು ಬಂಧಿಸಿದ್ದರು. ಈ ಬಗ್ಗೆ ಮಂಗಳೂರು ನಗರ ಪೊಲೀಸ್ ಕಮಿಷನರ್ ಶಶಿಕುಮಾರ್ ಅವರು ಸುದ್ದಿಗೋಷ್ಠಿ ನಡೆಸಿದ್ದು, ಆ ವೇಳೆ ಆರೋಪಿಯನ್ನು ಕರೆ ತರಲಾಗಿತ್ತು. ಈ ಸಂದರ್ಭ ಸಂತ್ರಸ್ತ ಯುವತಿಯೂ ಸಹ ಅಲ್ಲಿಗೆ ಬಂದಿದ್ದು, ಆರೋಪಿಗೆ ಏಕಾಏಕಿ ಸುದ್ದಿಗೋಷ್ಠಿಯ ನಡುವೆಯೇ ಕಪಾಳಮೋಕ್ಷ ನಡೆಸಿದ್ದರು.
Kshetra Samachara
04/02/2021 07:14 am