ಕಾಪು: ಯುವಕರ ತಂಡವೊಂದು ಮನೆಗೆ ನುಗ್ಗಿ ಮನೆ ಮಂದಿಗೆ ಹಲ್ಲೆ ನಡೆಸಿದ ಘಟನೆ ಕಾಪು ಠಾಣಾ ವ್ಯಾಪ್ತಿಯ ಮಲ್ಲಾರಿನ ಗುಡ್ಡೆಕೇರಿ ಎಂಬಲ್ಲಿ ಸೋಮವಾರ ತಡರಾತ್ರಿ ನಡೆದಿದೆ.
ಘಟನೆಯಲ್ಲಿ ಹಸನಬ್ಬ ಹಾಗೂ ಅವರ ಸಹೋದರಿ ಮಮ್ತಾಜ್ ಗಾಯಗೊಂಡಿದ್ದಾರೆ. ತಡರಾತ್ರಿ ಸ್ವಿಫ್ಟ್ ಕಾರಿನಲ್ಲಿ ಬಂದ ಏಳು ಮಂದಿಯ ತಂಡ ನಿರ್ಮಾಣ ಹಂತದಲ್ಲಿದ್ದ ಮನೆಗೆ ಮಾರಕಾಯುಧಗಳಿಂದ ಬಂದು ಕಿಟಕಿ ಗಾಜು ಪುಡಿ ಮಾಡಿ ತಾತ್ಕಾಲಿಕವಾಗಿ ಇಡಲಾಗಿದ್ದ ಬಾಗಿಲನ್ನು ಮುರಿದು ಒಳನುಗ್ಗಿ ಕೋಣೆಯೊಳಗೆ ಮಲಗಿದ್ದ ಮಕ್ಕಳ ಸಹಿತ ಮನೆಯವರನ್ನು ಬಡಿದೆಬ್ಬಿಸಿ, 'ಹಸನಬ್ಬನ ತಮ್ಮ ಅಬ್ದುಲ್ ಸತ್ತಾರ್ ಎಲ್ಲಿ ?ಅವನನ್ನು ಬಿಡುವುದಿಲ್ಲ' ಎಂದಾಗ ಮಹಿಳೆಯರು ನಮಗೆ ಗೊತ್ತಿಲ್ಲ ಎಂದು ಉತ್ತರಿಸಿದಾಗ ಆಕ್ರೋಶಗೊಂಡ ತಂಡ ಮಹಿಳೆಯರ ಕುತ್ತಿಗೆಗೆ ತಲವಾರು ಇಟ್ಟು ಬೆದರಿಸಿದ್ದಾರೆ.
ಈ ವೇಳೆ ಮಕ್ಕಳು, ಮಹಿಳೆಯರ ಬೊಬ್ಬೆ ಕೇಳಿ ಪಕ್ಕದ ಶೆಡ್ಡಿನಲ್ಲಿ ಮಲಗಿದ್ದ ಹಸನಬ್ಬ ಓಡಿ ಬಂದಾಗ ಅವರನ್ನು ತಡೆದ ತಂಡ ಸತ್ತಾರ್ ಬಗ್ಗೆ ವಿಚಾರಿಸಿದ್ದಾರೆ. ಅವರು ತಿಳಿದಿಲ್ಲ ಎಂದಾಗ ದೊಣ್ಣೆ ಹಾಗೂ ತಲವಾರಿನಲ್ಲಿ ಹಲ್ಲೆ ನಡೆಸಿ, ಸ್ಥಳದಲ್ಲಿ ಬಿಯರ್ ಬಾಟಲ್ ಒಡೆದು ಪರಾರಿಯಾಗಿದ್ದಾರೆ.
ತಕ್ಷಣ ಗಾಯಗೊಂಡಿರುವ ಹಸನಬ್ಬ ಹಾಗೂ ಮುಮ್ತಾಜ್ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಇದೇ ಘಟನೆಗೆ ಸಂಬಂಧಿಸಿ ಇವರ ಇನ್ನೋರ್ವ ಸಹೋದರ ಆಟೋ ಚಾಲಕ ಮುಂಜಾನೆ 4-30ರ ಸುಮಾರಿಗೆ ಕಾಪು ಪೊಲೀಸ್ ಠಾಣೆಗೆ ದೂರು ನೀಡಲು ಹೋದಾಗ ಠಾಣೆ ಮುಂಭಾಗದಲ್ಲೇ ಅವರಿಗೆ ತಲವಾರು ದಾಳಿ ನಡೆಸಿ ಪರಾರಿಯಾಗಿದ್ದಾರೆ ದುಷ್ಕರ್ಮಿಗಳು.
ಈ ಕೃತ್ಯದಲ್ಲಿ ಭಾಗಿಯಾದವರು ಸ್ಥಳೀಯ ವ್ಯಕ್ತಿಗಳೇ ಆಗಿದ್ದು, ಅವರ ವಿರುದ್ಧ ಕಾಪು ಠಾಣೆಗೆ ದೂರು ನೀಡಿದ್ದಾರೆ. ಈ ಕೃತ್ಯದ ಹಿಂದೆ ಈ ತಂಡ ಹಾಗೂ ಅಬ್ದುಲ್ ಸತ್ತಾರ್ ನಡುವಿನ ಮೈಮನಸ್ಸು ಕಾರಣ ಎಂಬುದಾಗಿ ಮೇಲ್ನೋಟಕ್ಕೆ ಕಂಡು ಬರುತ್ತಿದ್ದು, ಪೊಲೀಸ್ ತನಿಖೆಯಿಂದಷ್ಟೇ ಸತ್ಯ ಹೊರ ಬೀಳಲಿದೆ.
Kshetra Samachara
23/09/2020 02:02 pm