ಬಂಟ್ವಾಳ: ಎರಡೂವರೆ ವರ್ಷಗಳ ಹಿಂದೆ ಬಂಟ್ವಾಳದ ಮಣಿಹಳ್ಳದಲ್ಲಿ ಮಧ್ಯರಾತ್ರಿ ಪೊಲೀಸ್ ಸಿಬ್ಬಂದಿ ಮೇಲೆ ಕಾರು ಚಲಾಯಿಸಿದ್ದು ಹಾಗೂ ಹಲ್ಲೆ ನಡೆಸಲು ಬಂದ ಪ್ರಕರಣಕ್ಕೆ ಸಂಬಂಧಿಸಿ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಸೋಮವಾರ ತೀರ್ಪು ನೀಡಿದ್ದು, ಆರೋಪಿಗಳಿಗೆ 1 ವರ್ಷ ಜೈಲು ಶಿಕ್ಷೆ ಹಾಗೂ ತಲಾ 3 ಸಾವಿರ ರೂ. ದಂಡ ವಿಧಿಸಿದ್ದಾರೆ.
ಮಾರಿಪಳ್ಳ ನಿವಾಸಿ ಸದ್ದಾಂ ಹುಸೈನ್, ಕುಪ್ಪೆಪದವು ನಿವಾಸಿ ಮಹಮ್ಮದ್ ಇರ್ಷಾದ್ ಶಿಕ್ಷೆಗೊಳಪಟ್ಟವರು.
ಮತ್ತೋರ್ವ ಆರೋಪಿ ಮಹಮ್ಮದ್ ಮುಕ್ಸೀನ್ ಕೋರ್ಟ್ ಜಾಮೀನು ಪಡೆದು ಬಳಿಕ ಹಾಜರಾಗದೆ ತಲೆಮರೆಸಿಕೊಂಡಿದ್ದು,ಅತನ ವಿಚಾರಣೆ, ಶೋಧ ಇನ್ನೂ ಮುಂದುವರಿದಿದೆ.
ಪ್ರಕರಣದ ಹಿನ್ನೆಲೆ: 2018 ರ ಜೂ.1 ರಂದು ಬೆಳ್ತಂಗಡಿಯ ಗುರುವಾಯನಕೆರೆ ವ್ಯಾಪ್ತಿಯಲ್ಲಿ ರಾತ್ರಿ 11.30 ರ ಹೊತ್ತಿಗೆ ಅನುಮಾನಾಸ್ಪದವಾಗಿ ತಿರುಗುತ್ತಿದ್ದ ಕಾರನ್ನು ಗುರುವಾಯನಕೆರೆ ಪೊಲೀಸ್ ಚೆಕ್ ಪಾಯಿಂಟ್ ನಲ್ಲಿ ಪೊಲೀಸರು ನಿಲ್ಲಿಸಲು ಸೂಚನೆ ನೀಡಿದರೂ, ಧಿಕ್ಕರಿಸಿ ಬಂಟ್ವಾಳದತ್ತ ಧಾವಿಸಿ ಬಂದಿತ್ತು. ಈ ಬಗ್ಗೆ ಮಾಹಿತಿ ಪಡೆದ ರಾತ್ರಿ ಗಸ್ತಿನಲ್ಲಿದ್ದ ಬಂಟ್ವಾಳ ಗ್ರಾಮಾಂತರ ಠಾಣೆ ಪಿಎಸ್ಐ ಪ್ರಸನ್ನ ಮತ್ತು ಬಂಟ್ವಾಳ ನಗರ ಠಾಣೆ ಪಿಎಸ್ಐ ಚಂದ್ರಶೇಖರ್ ತಂಡ ಮಣಿಹಳ್ಳ ಬಳಿ ಶರವೇಗದಲ್ಲಿ ಬರುತ್ತಿದ್ದ ಶಂಕಿತ ಕಾರನ್ನು ನಿಲ್ಲಿಸಲು ಸೂಚನೆ ನೀಡಿದರೂ, ಆರೋಪಿಗಳು ನಿಲ್ಲಿಸದೆ ಸಿಬ್ಬಂದಿ ಮೇಲೆಯೇ ಕಾರು ಹಾಯಿಸಲು ಬಂದಿದ್ದರು. ಅಪಾಯದ ಅರಿವಾದ ಪಿಎಸ್ಐ ಪ್ರಸನ್ನ ಪಿಸ್ತೂಲ್ ನಿಂದ ಕಾರಿನ ಕಡೆ ಫೈರಿಂಗ್ ಮಾಡಿದ್ದು, ಇದೇ ವೇಳೆ ಪಿಎಸ್ಐ ಚಂದ್ರಶೇಖರ್ ಕಾರಿನ ಚಕ್ರಕ್ಕೆ ಪಂಪ್ ಆ್ಯಕ್ಷನ್ ಗನ್ ನಿಂದ ಫೈರಿಂಗ್ ಮಾಡಿದ್ದರು. ಆಗ ಆರೋಪಿಗಳ ಪೈಕಿ ಸದ್ದಾಂ ಮತ್ತು ಇರ್ಷಾದ್ ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿದ್ದರು. ಈ ಸಂದರ್ಭ ಮೂವರು ಆರೋಪಿಗಳಾದ ಮಹಮ್ಮದ್ ಮುಕ್ಸೀನ್, ಸದ್ದಾಂ ಹುಸೈನ್ ಮಹಮ್ಮದ್ ಇರ್ಷಾದ್ ಎಂಬವರನ್ನು ವಶಕ್ಕೆ ಪಡೆಯಲಾಗಿತ್ತು. ಮತ್ತಿಬ್ಬರು ಆರೋಪಿಗಳಾದ ಮನ್ಸೂರ್, ಅಮ್ಮಿ ಪರಾರಿಯಾಗಿದ್ದರು.
ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಂಟ್ವಾಳ ಪೊಲೀಸ್ ವೃತ್ತ ನಿರೀಕ್ಷಕ ಟಿ.ಡಿ. ನಾಗರಾಜ್ ತನಿಖೆ ನಡೆಸಿ ಕೋರ್ಟ್ ಗೆ ಆರೋಪ ಪಟ್ಟಿ ಸಲ್ಲಿಸಿದ್ದರು. ಈ ಪ್ರಕರಣ ವಿಚಾರಣೆ ನಡೆಸಿದ ಮಂಗಳೂರಿನ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ರಾಮೇಲಿಂಗೇಗೌಡ ಅವರು ಆರೋಪಿಗಳಿಬ್ಬರಿಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿದರು. ಈ ಪ್ರಕರಣದಲ್ಲಿ ಸಿಬ್ಬಂದಿ ಎಚ್.ಸಿ. ಗಿರೀಶ್, ಎಚ್.ಸಿ. ಸುರೇಶ್, ಪಿ.ಸಿ. ಮಹಮ್ಮದ್ ನಝೀರ್, ಪಿ.ಸಿ. ಆದರ್ಶ್, ಎಪಿಸಿ ಸಂಪತ್, ಹೋಂ ಗಾರ್ಡ್ ಭಾಸ್ಕರ ಪ್ರಕರಣ ಪತ್ತೆ ಹಚ್ಚುವ ಕಾರ್ಯದಲ್ಲಿ ಶ್ರಮಿಸಿದ್ದರು.
Kshetra Samachara
21/12/2020 08:46 pm