ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಡುಪಣಂಬೂರು: ಕಲ್ಲಾಪು ಬಳಿ ಪುತ್ರ ಸಹಿತ ದಂಪತಿ ಆತ್ಮಹತ್ಯೆ; ಜನತೆ ದಿಗ್ಭ್ರಮೆ

ಮುಲ್ಕಿ: ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಪಡುಪಣಂಬೂರು ಕಲ್ಲಾಪು ಬಳಿ ಒಂದೇ ಕುಟುಂಬದ ಮೂವರು ಸಾಮೂಹಿಕ ಆತ್ಮಹತ್ಯೆ ಮಾಡಿಕೊಂಡ ಹೃದಯವಿದ್ರಾವಕ ಘಟನೆ ಸೋಮವಾರ ಮಧ್ಯಾಹ್ನ ಬೆಳಕಿಗೆ ಬಂದಿದೆ.

ಮೃತರನ್ನು ಮೂಲತಃ ಮುಂಬೈ ನಿವಾಸಿ ಇಂದಿರಾ ಎಂಬವರ ಬಾಡಿಗೆ ಮನೆಯಲ್ಲಿ ವಾಸವಿದ್ದ ವಿನೋದ್ ಸಾಲ್ಯಾನ್ (38), ಪತ್ನಿ ರಚನಾ (38), ಪುತ್ರ ಸಾಧ್ಯ (10) ಎಂದು ಗುರುತಿಸಲಾಗಿದೆ. ಮೃತ ವಿನೋದ್ ಸಾಲ್ಯಾನ್ ಮುಂಬೈಯಲ್ಲಿ ಟಾಟಾ ಹೌಸಿಂಗ್ ನಲ್ಲಿ ಕೆಲಸಕ್ಕಿದ್ದು ವರ್ಷದ ಹಿಂದೆ ಹಳೆಯಂಗಡಿ ಸಮೀಪದ ಪಡು ಪಣಂಬೂರಿನ ಬೆಳ್ಳಾಯರು ಕಲ್ಲಾಪು ಬಳಿ ಬಾಡಿಗೆಮನೆಯಲ್ಲಿ ವಾಸವಿದ್ದು, ಪಡುಪಣಂಬೂರು ಪರಿಸರದಲ್ಲಿ ರಿಯಲ್ ಎಸ್ಟೇಟ್ ಉದ್ಯಮ ನಡೆಸುತ್ತಿದ್ದರು.

ಶನಿವಾರ ರಾತ್ರಿಯೇ ಸಾಮೂಹಿಕ ಆತ್ಮಹತ್ಯೆ ಮಾಡಿಕೊಂಡಿರಬೇಕೆಂದು ನೆರೆ ಮನೆಯವರು ಶಂಕಿಸಿದ್ದಾರೆ. ಎರಡು ದಿನಗಳಿಂದ ವಿನೋದ್ ಸಾಲ್ಯಾನ್ ಕುಟುಂಬದ ಮಂದಿ ಹೊರಗೆ ಬರದೇ ಇದ್ದುದನ್ನು ಕಂಡು ಮನೆಯ ಕಿಟಕಿ ಒಡೆದು ನೋಡಿದಾಗ ಆತ್ಮಹತ್ಯೆ ಮಾಡಿರುವುದು ಗೊತ್ತಾಗಿದ್ದು, ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.

ಮೃತ ವಿನೋದ್ ಸಾಲ್ಯಾನ್ ಕುತ್ತಿಗೆಯಲ್ಲಿ ಬಟ್ಟೆ ಸಹಿತ ಮೊಬೈಲ್ ಚಾರ್ಜರ್ ಕಂಡುಬಂದಿದ್ದು, ಪತ್ನಿ ಹಾಗೂ ಪುತ್ರನಿಗೆ ವಿಷ ನೀಡಿ, ಬಳಿಕ ತಾನು ವಿಷ ತೆಗೆದುಕೊಂಡು ನರಳಾಡಿ, ತಾನು ಸಾಯಲೆಂದು ಮೊಬೈಲ್ ಚಾರ್ಜರ್ ಮೂಲಕ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಸ್ಥಳಕ್ಕೆ ಎಸಿಪಿ ಬೆಳ್ಳಿಯಪ್ಪ, ಮುಲ್ಕಿ ಸರ್ಕಲ್ ಇನ್ ಸ್ಪೆಕ್ಟರ್ ಕುಸುಮೋಧರ್, ಎಸ್ಸೈ ವಿನಾಯಕ ತೋರಗಲ್ ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ವೆನ್ಲಾಕ್ ಗೆ ಕೊಂಡೊಯ್ಯಲಾಗಿದೆ. ಪಡುಪಣಂಬೂರು ಗ್ರಾಮೀಣ ಪರಿಸರದಲ್ಲಿ ಸಾಮೂಹಿಕ ಆತ್ಮಹತ್ಯೆ ಸ್ಥಳೀಯರನ್ನು ಭಯಭೀತರನ್ನಾಗಿಸಿದೆ. ವಿನೋದ್ ಸಾಲ್ಯಾನ್ ರಿಯಲ್ ಎಸ್ಟೇಟ್ ಉದ್ಯಮ ನಡೆಸುತ್ತಿದ್ದು, ವ್ಯವಹಾರದಲ್ಲಿ ಭಾರಿ ನಷ್ಟವಾಗಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ.

Edited By : Nirmala Aralikatti
Kshetra Samachara

Kshetra Samachara

14/12/2020 02:51 pm

Cinque Terre

24.03 K

Cinque Terre

0