ಮಂಗಳೂರು: ಕದ್ರಿ ಠಾಣಾ ವ್ಯಾಪ್ತಿಯ ಮೂರು ಪ್ರತ್ಯೇಕ ಕಳ್ಳತನ ಪ್ರಕರಣದಲ್ಲಿ ಆರೋಪ ಸಾಬೀತಾದ ಹಿನ್ನೆಲೆ ಅಪರಾಧಿಗೆ ಮಂಗಳೂರಿನ 2 ನೇ ಜಿಲ್ಲಾ ಮತ್ತು ಹೆಚ್ಚುವರಿ ಸತ್ರ ನ್ಯಾಯಾಲಯವು ನಾಲ್ಕು ವರುಷಗಳ ಸಾದಾ ಸಜೆ ಹಾಗೂ ದಂಡವನ್ನ ವಿಧಿಸಿ ತೀರ್ಪಿತ್ತಿದೆ.
ರಾತ್ರಿ ಹೊತ್ತಲ್ಲಿ ಮಂಗಳೂರು ನಗರಕ್ಕೆ ಆಗಮಿಸಿ ಕಳ್ಳತನಗೈಯುತ್ತಿದ್ದ ತಮಿಳುನಾಡು ಮೂಲದ ಸೆಲ್ವಕುಮಾರ್ ಅಲಿಯಾಸ್ ರಮೇಶ್ ಎಂಬಾತನ ಅಪರಾಧ ಸಾಬೀತಾದ ಹಿನ್ನೆಲೆ ನ್ಯಾಯಾಲಯವು ಸಾದಾ ಸಜೆಯನ್ನ ವಿಧಿಸಿ ತೀರ್ಪಿತ್ತಿದೆ.
ಕಳ್ಳತನ ಪ್ರಕರಣ ಸಂಬಂಧ ಸೆಲ್ವಕುಮಾರ್ ನನ್ನು ಕದ್ರಿ ಠಾಣಾ ಪೊಲೀಸರು ಅಂದಿನ ಪೊಲಿಸ್ ಇನ್ಸ್ ಪೆಕ್ಟರ್ ಮಾರುತಿ ನಾಯಕ್ ಅವರ ಮಾರ್ಗದರ್ಶನದಲ್ಲಿ ಕಂಕನಾಡಿ ಬಳಿ ಶಂಕಾಸ್ಪದ ರೀತಿಯಲ್ಲಿ ತಿರುಗಾಡುತ್ತಿದ್ದಾಗ ಬಂಧಿಸಿದ್ದರು.
ಬಂಧಿತನ ವಿಚಾರಣೆ ಸಂದರ್ಭ 2016 ರ ಸೆಪ್ಟಂಬರ್ ತಿಂಗಳಿನಲ್ಲಿ ರಾಶಿ ಕಲೆಕ್ಷನ್ ಹಾಗೂ ಸಿಲ್ಕ್ಸ್ ನಲ್ಲಿ ನಡೆದ 24ಸಾವಿರ ರೂ. ಕಳ್ಳತನ ಹಾಗೂ ಅದೇ ವರುಷದ ನವೆಂಬರ್ ತಿಂಗಳಿನಲ್ಲಿ ತಾಜ್ ಸೈಕಲ್ ನಲ್ಲಿ ನಡೆದ 90 ಸಾವಿರಕ್ಕೂ ಅಧಿಕ ರೂಪಾಯಿಯ ಕಳ್ಳತನ ಹಾಗೂ 2017ರ ಮಾರ್ಚ್ 9 ರಂದು ಅಸ್ಸಾದಿ ಕನ್ ಸ್ಟ್ರಕ್ಶನ್ ನಲ್ಲಿ ನಡೆದ ಎರಡು ಮೊಬೈಲ್ ಕಳ್ಳತನ ಪ್ರಕರಣದಲ್ಲಿ ಈತನ ಕೈವಾಡವಿರುವುದು ಗೊತ್ತಾಗಿತ್ತು.
ಪ್ರಕರಣ ಸಂಬಂಧ ಕದ್ರಿ ಠಾಣಾ ಪೊಲೀಸರು ಬಂಧಿಸಿ, ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದರು. ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯವನ್ನ ಪ್ರಮುಖ ಸಾಕ್ಷಿಯಾಗಿ ಪರಿಗಣಿಸಿದ ನ್ಯಾಯಾಲಯವು ಪೂರಕ ಸಾಕ್ಷ್ಯಾಧಾರಗಳ ಅನ್ವಯ ನಾಲ್ಕು ವರುಷಗಳ ಸಾದಾ ಜೈಲು ವಾಸ ಹಾಗೂ ಐಪಿಸಿ ಸೆಕ್ಷನ್ 457 ರ ಅನ್ವಯ ಒಂದು ಸಾವಿರ ರೂ. ಹಾಗೂ ಐಪಿಸಿ 380 ರ ಅಪರಾಧದ ಅನ್ವಯ 2ಸಾವಿರ ರೂ. ದಂಡ ವಿಧಿಸಿದೆ.
ಅಲ್ಲದೇ ತಪ್ಪಿದ್ದಲ್ಲಿ ಹೆಚ್ಚುವರಿ ಒಂದು ತಿಂಗಳ ಶಿಕ್ಷೆಯನ್ನ ಅಪರಾಧಿಗೆ ಖಾಯಂ ಗೊಳಿಸಿದೆ. ಸರಕಾರದ ಪರ ಪಬ್ಲಿಕ್ ಪ್ರಾಸಿಕ್ಯೂಟರ್ ಮೋಹನ್ ಕುಮಾರ್ ವಾದಿಸಿದ್ದರು.
Kshetra Samachara
10/12/2020 07:22 pm