ಬಂಟ್ವಾಳ: ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಸೂರಿಕುಮೇರು ಮಸೀದಿ ಮುಂಭಾಗ ಮಂಗಳವಾರ ಬೆಳಗ್ಗೆ ಸುಮಾರು 3ರಿಂದ 4 ಗಂಟೆ ಮಧ್ಯೆ ಗ್ಯಾಸ್ ಟ್ಯಾಂಕರ್ ರಸ್ತೆ ಮಧ್ಯೆ ಉರುಳಿ ಬಿದ್ದ ಪರಿಣಾಮ ಸ್ಥಳದಲ್ಲಿ ಆತಂಕದ ಪರಿಸ್ಥಿತಿ ನಿರ್ಮಾಣವಾಗಿದ್ದು, ವಾಹನ ಸಂಚಾರ ಸ್ಥಗಿತಗೊಂಡಿದೆ.
ಘಟನೆಯಲ್ಲಿ ಅದೃಷ್ಟವಶಾತ್ ಗ್ಯಾಸ್ ಲೀಕ್ ಆಗದ ಕಾರಣ ಯಾವುದೇ ಅಪಾಯ ಸಂಭವಿಸಿಲ್ಲ. ಆದರೂ ಮುಂಜಾಗರೂಕತಾ ಕ್ರಮವಾಗಿ ರಸ್ತೆ ಸಂಚಾರವನ್ನು ಬಂದ್ ಮಾಡಲಾಗಿದೆ. ಈಗಾಗಲೇ ತಾಂತ್ರಿಕ ತಂಡ ಸ್ಥಳಕ್ಕೆ ಆಗಮಿಸಿದ್ದು, ಮುಂಜಾಗ್ರತಾ ಕ್ರಮ ಕೈಗೊಳ್ಳುವುದರ ಜೊತೆಗೆ ಸುರಕ್ಷಿತವಾಗಿ ಟ್ಯಾಂಕರ್ ಲಿಫ್ಟ್ ಮಾಡುವ ಕಾರ್ಯ ಪ್ರಗತಿಯಲ್ಲಿದೆ. ವಿಟ್ಲ ಎಸ್.ಐ. ವಿನೋದ್ ರೆಡ್ಡಿ, ಬಂಟ್ವಾಳ ಟ್ರಾಫಿಕ್ ಎಸ್ಸೈ ರಾಜೇಶ್ ಕೆ.ವಿ. ಮತ್ತು ವಿಟ್ಲ, ಬಂಟ್ವಾಳ ಟ್ರಾಫಿಕ್ ಠಾಣೆಯ ಪೊಲೀಸ್ ಸಿಬ್ಬಂದಿ ಸ್ಥಳದಲ್ಲಿದ್ದು, ಬದಲಿ ರಸ್ತೆಯ ಸೂಚನೆ ನೀಡುತ್ತಿದ್ದಾರೆ.
ಮುಂಜಾಗ್ರತಾ ಕ್ರಮವಾಗಿ ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಮಾಣಿಯಿಂದ ಕಲ್ಲಡ್ಕ ಭಾಗದಲ್ಲಿ ಎಲ್ಲ ವಾಹನ ಸಂಚಾರ ಸ್ಥಗಿತಗೊಳಿಸಲಾಗಿದೆ. ಮಂಗಳೂರು ಕಡೆಯಿಂದ ಬರುವ ವಾಹನವನ್ನು ಕಲ್ಲಡ್ಕ, ವಿಟ್ಲ ರಸ್ತೆ ಮೂಲಕ ಹಾಗೂ ಬೆಂಗಳೂರು, ಉಪ್ಪಿನಂಗಡಿ ಕಡೆಯಿಂದ ಬರುವ ವಾಹನಗಳನ್ನು ಮಾಣಿ, ಬುಡೋಳಿ, ಕಬಕ ಮೂಲಕ ಬದಲಿ ರಸ್ತೆಯ ವ್ಯವಸ್ಥೆ ಮಾಡಲಾಗಿದೆ.
Kshetra Samachara
02/02/2021 08:27 am